ಚೆನ್ನೈ: ಕಾಲಿವುಡ್ ನಟ- ರಾಜಕಾರಣಿ ವಿಜಯ್ ದಳಪತಿ ಅವರು ಇಂದು ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ತಮ್ಮ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಧ್ವಜ ಹಾಗೂ ಗೀತೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು.
ಧ್ವಜದ ಮೇಲೆ ಮತ್ತು ಕೆಳಭಾಗದಲ್ಲಿ ಕೆಂಪು ಬಣ್ಣವಿದ್ದು, ಮಧ್ಯದಲ್ಲಿ ಹಳದಿ ಬಣ್ಣ ಮತ್ತು ವಿಜಯದ ಸಂಕೇತವಾಗಿ ಎರಡು ಆನೆಗಳು ಮತ್ತು ಅಲ್ಬಿಜಿಯಾ ಲೆಬ್ಬೆಕ್ (Albizia lebbeck Flower) ಹೂವಿನ ಚಿತ್ರವಿದೆ. ಟಿವಿಕೆ ಪಕ್ಷದ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ಗಳಲ್ಲಿ ತನ್ನ ಧ್ವಜಗೀತೆಯನ್ನು ಪ್ರಕಟಿಸಲಾಗಿದೆ.
ಆಗಸ್ಟ್ 19 ರಂದು ಪನೈಯೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಮಧ್ಯದಲ್ಲಿ ವಿಜಯ್ ಅವರ ಚಿತ್ರವಿರುವ ಹಳದಿ ಬಾವುಟದೊಂದಿಗೆ ವಿಜಯ್ ಅವರು ತಾಲೀಮು ನಡೆಸುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ 9.15ಕ್ಕೆ ವಿಜಯ್ ಪಕ್ಷದ ಧ್ವಜ ಹಾಗೂ ಧ್ವಜಗೀತೆಯನ್ನು ಅನಾವರಣಗೊಳಿಸಿದರು. ವಿಜಯ್ ಅವರ ತಂದೆ ಹಾಗೂ ತಾಯಿ ಸೇರಿದಂತೆ 300ಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಧ್ಜಜ ಹಾಗೂ ಗೀತೆಯನ್ನು ಅನಾವರಣಗೊಳಿಸಿ ಮಾತನಾಡಿದ ವಿಜಯ್, ಪಕ್ಷ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ನಡೆಯಲಿದ್ದು, ಶೀಘ್ರದಲ್ಲೇ ನಡೆಯಲಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಧ್ವಜ ಹಾಗೂ ಗೀತೆಯ ಮಹತ್ವವನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ವಿಜಯ್, ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಪ್ರಾರಂಭಿಸಿದ್ದು, 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸ್ಟಾರ್ ನಟ ಹೇಳಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ಯಾವುದೇ ರಾಜಕೀಯ ಬಣವನ್ನು ಬೆಂಬಲಿಸಿರಲಿಲ್ಲ.
ಇದನ್ನೂ ಓದಿ: ರಾಜಕಾರಣವೆಂಬ ಸಿನಿಮಾದಲ್ಲಿ ಯಾರು ಹೀರೋ, ಯಾರು ವಿಲನ್, ಯಾರು ನಿರ್ದೇಶಕ ಎಂಬುದು ಗೊತ್ತಾಗೋಲ್ಲ: ಯು.ಟಿ.ಖಾದರ್ - U T Khader