ಬೆಂಗಳೂರು: ಸಿನಿ ತಾರೆಯರು ಚಿತ್ರರಂಗದಲ್ಲಿ ಯಶಸ್ಸು ಕಾಣಬೇಕೆಂಬ ಉದ್ದೇಶದಿಂದ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳೋದು ಹೊಸತೇನೆಲ್ಲ. ಇದೀಗ ಹಿರಿಯ ಜನಪ್ರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್ ಅವರು ಆದಿತ್ಯ ಎಂದು ಹೆಸರು ಬದಲಾಯಿಸಿಕೊಂಡು ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ.
ವಿಜಯ್ ಪಾಳೇಗಾರ್ ನಿರ್ದೇಶನದ ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಸುಂದರ ಪ್ರೇಮಕಥೆಗೆ "ರಾಶಿ" ಎಂದು ಹೆಸರಿಡಲಾಗಿದೆ. ಆದಿತ್ಯ ಶಶಿಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ನಾಯಕನಿಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿದೆ. ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ.ಎಸ್. ಚಂದ್ರಶೇಖರ್, ನಟ ಶಶಿಕುಮಾರ್, ಬೆಂಗಳೂರು ಪೊಲೀಸ್ ಉಪ ಆಯುಕ್ತರಾದ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಎಸ್ ಚಿದಂಬರ್ ಸೇರಿದಂತೆ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭಕ್ಕೆ ಸಾಕ್ಷಿಯಾದರು.

ಟೈಟಲ್ ರಿಲೀಸ್ ನಂತರ ಮಾತನಾಡಿದ ಆದಿತ್ಯ ಶಶಿಕುಮಾರ್, ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ. ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಬಹಳ ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು ವಿನಂತಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೆ 14 ದಿನಗಳ ನ್ಯಾಯಾಂಗ ಬಂಧನ - Jani Master Case
ಬಳಿಕ ನಿರ್ದೇಶಕ ವಿಜಯ್ ಪಾಳೇಗಾರ್ ಮಾತನಾಡಿ, ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖಿಲೇಶ್ ಅವರು ನನ್ನನ್ನು ಕರೆದು ಈ ಚಿತ್ರವನ್ನು ನಿರ್ದೇಶಿಸಬೇಕೆಂದರು. ಅಖಿಲೇಶ್ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದೇನೆ. ಟ್ರಿಗರ್ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದು ಎಂದು ತಿಳಿಸಿದರು.

ಇದನ್ನೂ ಓದಿ: ಪ್ರಭು ಮುಂಡ್ಕುರ್ ಅಭಿನಯದ 'ಮರ್ಫಿ' ಸಿನಿಮಾ ಸಾಂಗ್ ರಿಲೀಸ್ - Mogachi song from Murphy
ಆದಿತ್ಯ ಶಶಿಕುಮಾರ್ ಜೋಡಿಯಾಗಿ ಕಿರುತೆರೆಯಲ್ಲಿ ಗಮನ ಸೆಳೆದಿರುವ ಸಮೀಕ್ಷಾ ಅಭಿನಯಿಸಲಿದ್ದಾರೆ. ಇವರ ಜೊತೆ ಹಿರಿಯ ನಟ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಮುಂತಾದವರು ನಟಿಸಲಿದ್ದಾರೆ. ಧುವನ್ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಪಕ ಅಖಿಲೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ. ಶೀಘ್ರದಲ್ಲೇ ಚಿತ್ರೀಕರಣ ಶುರು ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.