ಹೈದರಾಬಾದ್: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಬಿ ಹ್ಯಾಪಿ'. ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿರುವ ನಟ, ಈ ಚಿತ್ರದಲ್ಲಿ ಸಿಂಗಲ್ ಫಾದರ್ ಆಗಿ ನಟಿಸಿದ್ದಾರೆ. ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ 'ಕಿಂಗ್'ನಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಈ ಚಿತ್ರ ಬಿಡುಗಡೆ ಆಗಲಿದೆ. ನಾಳೆ ಡಾಟರ್ಸ್ ಡೇ ಇದ್ದು, ಅದಕ್ಕೂ ಮೊದಲು 'ಬಿ ಹ್ಯಾಪಿ' ತಂಡ ಚಿತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಮೂಲಕ ಜೂನಿಯರ್ ಬಚ್ಚನ್ ಅವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದಾರೆ.
ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಪ್ರೈಮ್ ವಿಡಿಯೋ ಇಂದು ಬಿ ಹ್ಯಾಪಿ ಚಿತ್ರದ ಮೊದಲ ನೋಟವನ್ನು ಅನಾವರಣಗೊಳಿಸಿದೆ. ಈ ಚಿತ್ರದ ಮೂಲಕ ಅಭಿಷೇಕ್ ಬಚ್ಚನ್ ಮತ್ತು ಅವರ ಯುವ ಸಹನಟಿ ಇನಾಯತ್ ವರ್ಮಾ ಮತ್ತೊಮ್ಮೆ ತೆರೆಹಂಚಿಕೊಂಡಿದ್ದಾರೆ. ಈ ಹಿಂದೆ ಲುಡೋದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಹೊಸದಾಗಿ ಬಿಡುಗಡೆಯಾಗಿರುವ ಪೋಸ್ಟರ್ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ.
ಎಬಿಸಿಡಿ ಸರಣಿ ಸಿನಿಮಾಗಳು ಮತ್ತು ಸ್ಟ್ರೀಟ್ ಡ್ಯಾನ್ಸರ್ 3D ಯಂತಹ ಜನಪ್ರಿಯ ಡ್ಯಾನ್ಸ್ ಸಿನಿಮಾಗಳಿಂದ ಹೆಸರುವಾಸಿಯಾಗಿರುವ ರೆಮೋ ಡಿಸೋಜಾ ಅವರು ಈ 'ಬಿ ಹ್ಯಾಪಿ' ಚಿತ್ರವನ್ನು ನಿರ್ದೇಶಿಸಿದ್ದಾರೆ. ನೋರಾ ಫತೇಹಿ, ನಾಸರ್, ಜಾನಿ ಲಿವರ್ ಮತ್ತು ಹರ್ಲೀನ್ ಸೇಥಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪೋಸ್ಟರ್ ಅಭಿಷೇಕ್ ಮತ್ತು ಇನಾಯತ್ ಅವರನ್ನು ಕ್ರಿಯಾತ್ಮಕ ನೃತ್ಯ ಭಂಗಿಯಲ್ಲಿ ಪ್ರದರ್ಶಿಸಿದೆ. ಸಿನಿಮಾದಲ್ಲಿ ಡ್ಯಾನ್ಸ್ ಕಥೆಯ ಒಂದು ಭಾಗ ಆಗಿರಬಹುದೆಂಬ ಸುಳಿವನ್ನು ಈ ಪೋಸ್ಟರ್ ಒದಗಿಸಿದೆ.
ಇತ್ತೀಚಿನ ಪೋಸ್ಟರ್‌ನಲ್ಲಿ, ತಂದೆ - ಮಗಳು ಜೋಡಿಯ ವಿಭಿನ್ನ ನೋಟ ಸಿಕ್ಕಿದೆ. "ದೇಶದ ಅತಿದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪ್ರದರ್ಶನ ನೀಡಲು ಹಾತೊರೆಯುತ್ತಿರುವ ಒಂಟಿ ತಂದೆ ಮತ್ತು ಅವರ ಪ್ರತಿಭಾವಂತ ಮಗಳ ಪ್ರಯಾಣ. ತಂದೆ ತನ್ನ ಮಗಳ ಕನಸ್ಸನ್ನು ನನಸಾಗಿಸಲು ಮತ್ತು ಆಕೆಯ ಸಂತೋಷಕ್ಕಾಗಿ ಸಾಹಸಕ್ಕಿಳಿಯುತ್ತಾನೆ'' ಎಂಬ ಕ್ಯಾಪ್ಷನ್ ನೋಡುಗರ ಗಮನ ಸೆಳೆದಿದೆ.
ಬಿಡುಗಡೆ ದಿನಾಂಕ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಚಿತ್ರದ ಕಥಾವಸ್ತು ಅಭಿಷೇಕ್ ತಮ್ಮ ಮಗಳ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಸುತ್ತ ಸಾಗುತ್ತದೆ ಎಂಬುದರ ಸುಳಿವು ಚಿತ್ರತಂಡದ (ಪೋಸ್ಟರ್) ಕಡೆಯಿಂದ ಸಿಕ್ಕಿದೆ. ಸಿಂಗಲ್ ಫಾದರ್ ಮತ್ತು ಡ್ಯಾನ್ಸ್ ರಿಯಾಲಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕಥೆ ಸಾಗುತ್ತದೆ. ಚಿತ್ರವನ್ನು ರೆಮೋ ಡಿಸೋಜಾ ಅವರ ಪತ್ನಿ ಲಿಜೆಲ್ ರೆಮೋ ಡಿಸೋಜಾ ನಿರ್ಮಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.