ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನೀಟ್ ಎಂಡಿಎಸ್-2024ರಲ್ಲಿ (NEET MDS-2024) ಅರ್ಹರಾಗಿರುವ ಅಭ್ಯರ್ಥಿಗಳಿಂದ 2024-25ನೇ ಸಾಲಿಗೆ ರಾಜ್ಯದಲ್ಲಿನ ಸ್ನಾತಕೋತ್ತರ ಪದವಿ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಪಿಜಿಇಟಿ-2024ಕ್ಕೆ ಜುಲೈ 10ರ ಬೆಳಗ್ಗೆ 11.00 ಗಂಟೆಯೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದಾದೆ. ನೋಂದಣಿ ಮೂಲಕ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಜುಲೈ 10ರ ಸಂಜೆ 6.00 ಗಂಟೆ ವರೆಗೆ ಅವಕಾಶವಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀಟ್ ಎಂಡಿಎಸ್-24ರಲ್ಲಿ (NEET MDS-2024) ನಿಗದಿಪಡಿಸಿರುವ ಕನಿಷ್ಠ ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ಮಾತ್ರ ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ. ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಅನ್ವಯಿಸುವುದಿಲ್ಲ. ಆದ್ದರಿಂದ ನೀಟ್ ಎಂಡಿಎಸ್ - 2024ರಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆದವರು ಮಾತ್ರ (50ನೇ ಪರ್ಸೆಂಟೈಲ್ ಅಥವಾ ಅದಕ್ಕಿಂತ ಹೆಚ್ಚು) ಅರ್ಹತೆ ಹೊಂದಿ, ಪ್ರವೇಶಕ್ಕಾಗಿ ನೋಂದಣಿ ಮಾಡಿ ಕೊಳ್ಳಬಹುದಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ಓಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.
ದಾಖಲೆ ಪರಿಶೀಲನೆ: ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗಾಗಿ ಕೆಇಎ ಪೋರ್ಟಲ್ ಅನ್ನು ಜುಲೈ 8ರಿಂದ ತೆರೆಯಲಾಗಿದೆ. ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗಾಗಿ ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ಜುಲೈ 9ರಿಂದ 11ರೊಳಗೆ ಹಾಜರಾಗಬೇಕೆಂದು ಕಾರ್ಯನಿರ್ವಾಹಕ ನಿರ್ದೇಶಕರು ಸೂಚಿಸಿದ್ದಾರೆ.
ಇದನ್ನೂ ಓದಿ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ನೇಮಕಾತಿ: ಬಿಇ ಪದವೀಧರರಿಗೆ ಉದ್ಯೋಗಾವಕಾಶ - Steel Authority of India Limited