ಲಖನೌ: ಉತ್ತರಪ್ರದೇಶದ ಖಾಸಗಿ ಕಾಲೇಜುಗಳು 2024-25ರ ಶೈಕ್ಷಣಿಕ ಅವಧಿಗೆ ಎಂಬಿಬಿಎಸ್ ಶುಲ್ಕವನ್ನು ಪ್ರಕಟಿಸಿವೆ. ಈ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (DGME) ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಉತ್ತರಪ್ರದೇಶದ ಎಲ್ಲ ಖಾಸಗಿ ಕಾಲೇಜುಗಳ ಶುಲ್ಕದ ಸಂಪೂರ್ಣ ವಿವರಗಳನ್ನು ಪಡೆಯಬಹುದಾಗಿದೆ. ಇನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಷ್ಟು ಶುಲ್ಕ ವಿಧಿಸುತ್ತವೆ ಎಂಬ ಬಗ್ಗೆ ಡಿಜಿಎಂಜಿ (DGME) ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ಉತ್ತರಪ್ರದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮೊದಲ ವರ್ಷದ ಶುಲ್ಕ ಎಷ್ಟಿದೆ ಎಂಬುದನ್ನು ಪ್ರಕಟಿಸಲಾಗಿದೆ. ಬರೇಲಿ ಮೂಲದ ಶ್ರೀ ರಾಮ್ ಮೂರ್ತಿ ಸ್ಮಾರಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮೊದಲ ವರ್ಷಕ್ಕೆ ಸುಮಾರು 13,73,760 ರೂ. ಶುಲ್ಕ ನಿಗದಿ ಮಾಡಿದೆ. ಅದೇ ಸಮಯದಲ್ಲಿ ಸೀತಾಪುರದ ಹಿಂದ್ ಇನ್‌ಸ್ಟಿಟ್ಯೂಟ್ ಮೆಡಿಕಲ್ ಸೈನ್ಸಸ್‌ನಲ್ಲಿ ಕಡಿಮೆ ಶುಲ್ಕ ಅಂದರೆ 10,77,229 ರೂ. ನಿಗದಿ ಮಾಡಿದೆ. ಮತ್ತೊಂದೆಡೆ, ಗಾಜಿಯಾಬಾದ್‌ನ ಐಟಿಎಸ್ ಡೆಂಟಲ್ ಕಾಲೇಜು ಬಿಡಿಎಸ್‌ಗೆ 3,84,000 ರೂ. ಶುಲ್ಕವನ್ನು ನಿಗದಿ ಮಾಡಿದೆ. ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕದ ವಿವರಗಳು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (ಡಿಜಿಎಂಇ) ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಾರ್ಥ ಸಾರಥಿ ಸೇನ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಶುಲ್ಕ ನಿರ್ಧರಿಸಲು ಸಮಿತಿ ರಚಿಸಲಾಗಿದೆ. ಯಾವುದೇ ಖಾಸಗಿ ಕಾಲೇಜಿನಲ್ಲಿ ಕೋರ್ಸ್‌ನ ಶುಲ್ಕವನ್ನು ಸಮಿತಿಯ ಶಿಫಾರಸಿನ ಮೇರೆಗೆ ಮಾತ್ರ ನಿರ್ಧರಿಸಲಾಗುತ್ತದೆ. ಇದರ ನಂತರ, ಶುಲ್ಕ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ಪ್ರವೇಶ ಪಡೆಯುವ ಮೊದಲು ಕೌನ್ಸೆಲಿಂಗ್ ಸಮಯದಲ್ಲಿ ಪ್ರತಿ ಕಾಲೇಜಿನ ಶುಲ್ಕದ ಬಗ್ಗೆ ತಿಳಿದುಕೊಳ್ಳುತ್ತಾರೆ. ಪ್ರಸಕ್ತ ಅಧಿವೇಶನದಲ್ಲಿ ಜುಲೈ 10ರಿಂದ ನೀಟ್ ಎಂಡಿಎಸ್ ಕೌನ್ಸೆಲಿಂಗ್ ಆರಂಭವಾಗಿದ್ದು, ಪ್ರತಿ ವರ್ಷದಂತೆ ಕಾಲೇಜುಗಳಿಂದ ಶುಲ್ಕದ ವಿವರ ಕೇಳಲಾಗಿದ್ದು, ಕಾಲೇಜುಗಳು ನೀಡಿರುವ ನಿಗದಿತ ಶುಲ್ಕದ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಶುಲ್ಕದ ವಿವರಗಳು: ಇಲಾಖೆಯ ವೆಬ್‌ಸೈಟ್‌ನಲ್ಲಿ 26 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ಗೆ ಕಟ್ಟಬೇಕಾದ ಶುಲ್ಕದ ವಿವರಗಳಿದ್ದು, 19 ಖಾಸಗಿ ದಂತ ವೈದ್ಯಕೀಯ ಕಾಲೇಜುಗಳು ಬಿಡಿಎಸ್‌ಗೆ ಶುಲ್ಕದ ಮಾಹಿತಿಯನ್ನು ನೀಡಿವೆ ಎಂದು ಜನರಲ್ ವೈದ್ಯಕೀಯ ಶಿಕ್ಷಣ ನಿರ್ದೇಶಕ ಕಿಂಜಲ್ ಸಿಂಗ್ ತಿಳಿಸಿದ್ದಾರೆ. ಇದಲ್ಲದೇ 22 ವೈದ್ಯಕೀಯ ಕಾಲೇಜುಗಳು ಎಂಡಿ ಮತ್ತು ಎಂಎಸ್ ಕೋರ್ಸ್‌ಗಳ ಶುಲ್ಕದ ಮಾಹಿತಿಯನ್ನು ಕಳುಹಿಸಿವೆ. 17 ದಂತ ವೈದ್ಯಕೀಯ ಕಾಲೇಜುಗಳು ಎಂಡಿಎಸ್‌ಗೆ ಶುಲ್ಕವನ್ನು ರವಾನೆ ಮಾಡಿವೆ. ಪಿಜಿ ಕೋರ್ಸ್‌ಗಳಲ್ಲಿ ಕ್ಲಿನಿಕ್, ಪೆಥಾಲಜಿ ಮತ್ತು ನಾನ್ ಕ್ಲಿನಿಕಲ್ ವಿಭಾಗಗಳಿಗೆ ನಿಗದಿಪಡಿಸಿದ ಶುಲ್ಕದ ಪ್ರತ್ಯೇಕ ವಿವರಗಳು ಕೂಡಾ ಲಭ್ಯವಿವೆ.
ಸರ್ಕಾರಿ ಕಾಲೇಜುಗಳಲ್ಲಿ ಎಷ್ಟು ಶುಲ್ಕ ನಿಗದಿ ಮಾಡಲಾಗಿದೆ?: ಸರ್ಕಾರಿ ಕಾಲೇಜುಗಳಲ್ಲಿ ಮೊದಲ ವರ್ಷದ ಶುಲ್ಕ ವರ್ಷಕ್ಕೆ 18,000 ರೂ.ನಿಂದ 54,000 ರೂ. ನಿಗದಿ ಮಾಡಲಾಗಿದೆ. ಸರ್ಕಾರದಿಂದ ಕಾಲಕಾಲಕ್ಕೆ ಇದರಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಉತ್ತರಪ್ರದೇಶದಲ್ಲಿ ಅತ್ಯಂತ ದುಬಾರಿ ಶುಲ್ಕವೆಂದರೆ ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ. ಇದು ವರ್ಷಕ್ಕೆ ಅಂದಾಜು 54,600 ರೂ. ನಿಗದಿ ಮಾಡಿದೆ. ಆದರೆ ಅಗ್ಗದ ಕಾಲೇಜು ಎಂದರೆ ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಾಗಿದೆ. ಇಲ್ಲಿ ವಾರ್ಷಿಕ ಶುಲ್ಕ 18,000 ರೂ. ನಿಗದಿಪಡಿಸಲಾಗಿದೆ.
ಉತ್ತರಪ್ರದೇಶದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳು
- ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ, ಲಖನೌ
- ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜು, ಕಾನ್ಪುರ
- ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜು, ಆಗ್ರಾ
- ಮೋತಿ ಲಾಲ್ ನೆಹರು ವೈದ್ಯಕೀಯ ಕಾಲೇಜು, ಪ್ರಯಾಗರಾಜ್
- ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜು, ಮೀರತ್
- ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜು, ಝಾನ್ಸಿ
- ಬಾಬಾ ರಾಗಬವದಾಸ್ ವೈದ್ಯಕೀಯ ಕಾಲೇಜು, ಗೋರಖ್‌ಪುರ
- ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಸೈಫೈ, ಇಟಾವಾ
- ಸರ್ಕಾರಿ ವೈದ್ಯಕೀಯ ಕಾಲೇಜು, ಅಜಂಗಢ
- ಸರ್ಕಾರಿ ವೈದ್ಯಕೀಯ ಕಾಲೇಜು, ಬಂಡಾ
ಇದಲ್ಲದೇ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗೋಮ್ತಿ ನಗರ, ಲಖನೌ, ಸರ್ಕಾರಿ ವೈದ್ಯಕೀಯ ಕಾಲೇಜು, ಬದೌನ್, ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗ್ರೇಟರ್ ನೋಯ್ಡಾ ಸೇರಿದಂತೆ ಹಲವು ವೈದ್ಯಕೀಯ ಕಾಲೇಜುಗಳು ಸೇರಿವೆ.
ಇದನ್ನು ಓದಿ: DCET: ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆ ದಾಖಲಿಸಲು ಜುಲೈ 15ರವರೆಗೆ ಅವಕಾಶ - DCET 2024