ನವದೆಹಲಿ: ಭಾರತದ ಸಗಟು ಬೆಲೆ ಆಧಾರಿತ ಹಣದುಬ್ಬರವು ಏಪ್ರಿಲ್ನಲ್ಲಿ ಶೇಕಡಾ 1.26 ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಮಂಗಳವಾರ ತಿಳಿಸಿವೆ. ಮುಖ್ಯವಾಗಿ ಆಹಾರ ಮತ್ತು ಮೂಲ ಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದ ಸಗಟು ಬೆಲೆ ಆಧಾರಿತ ಹಣದುಬ್ಬರ ಏರಿಕೆಯಾಗಿದೆ ಎಂದು ಸರ್ಕಾರ ಹೇಳಿದೆ.
ಆಹಾರ ಹಣದುಬ್ಬರ ಏರಿಕೆ ಮತ್ತು ಇಂಧನ ಹಾಗೂ ವಿದ್ಯುತ್ ಬೆಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 1.4 ರಷ್ಟು ಹೆಚ್ಚಳದಿಂದಾಗಿ ಭಾರತದ ಸಗಟು ಬೆಲೆಗಳಲ್ಲಿನ ಹಣದುಬ್ಬರವು ಮಾರ್ಚ್ನಲ್ಲಿ ಇದ್ದ ಶೇಕಡಾ 0.53 ರಿಂದ ಏಪ್ರಿಲ್ನಲ್ಲಿ 12 ತಿಂಗಳ ಗರಿಷ್ಠ ಮಟ್ಟವಾದ ಶೇಕಡಾ 1.26 ಕ್ಕೆ ಏರಿಕೆಯಾಗಿದೆ.
ಸಗಟು ಆಹಾರ ಸೂಚ್ಯಂಕವು ಮಾರ್ಚ್ನಲ್ಲಿ ಇದ್ದ ಶೇಕಡಾ 4.65ಕ್ಕೆ ಹೋಲಿಸಿದರೆ ಶೇಕಡಾ 5.5 ರಷ್ಟು ಏರಿಕೆಯಾಗಿದೆ. ಆದರೆ ಉತ್ಪಾದನಾ ಸರಕುಗಳ ಬೆಲೆಗಳು ಹಿಂದಿನ ತಿಂಗಳಲ್ಲಿ ಇದ್ದ ಶೇಕಡಾ 0.8 ರಿಂದ ಏಪ್ರಿಲ್ನಲ್ಲಿ ಶೇಕಡಾ 0.4ಕ್ಕೆ ಇಳಿದಿದೆ. ಪ್ರಾಥಮಿಕ ವಸ್ತುಗಳ ಹಣದುಬ್ಬರವು ಮಾರ್ಚ್ನಲ್ಲಿ ಇದ್ದ ಶೇಕಡಾ 4.5 ರಿಂದ ಕಳೆದ ತಿಂಗಳು ಶೇಕಡಾ 5ಕ್ಕೆ ಏರಿಕೆಯಾಗಿದೆ.
ಏಳು ತಿಂಗಳ ಹಣದುಬ್ಬರವಿಳಿತದ ನಂತರ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ವರ್ಷದಿಂದ ವರ್ಷಕ್ಕೆ ಏರಿಕೆಯಾಗಿರುವುದು ಇದು ಸತತ ಆರನೇ ತಿಂಗಳು. ಮಾಸಿಕ ಆಧಾರದ ಮೇಲೆ, ಡಬ್ಲ್ಯುಪಿಐ ಶೇಕಡಾ 0.8ರಷ್ಟು ಏರಿಕೆಯಾಗಿದ್ದು, ಪ್ರಾಥಮಿಕ ವಸ್ತುಗಳು ಮತ್ತು ಆಹಾರ ಬೆಲೆಗಳು ಏಪ್ರಿಲ್ನಲ್ಲಿ ಸುಮಾರು ಶೇಕಡಾ 2 ರಷ್ಟು ಏರಿಕೆಯಾಗಿವೆ. ಹಾಗೆಯೇ ತಯಾರಿಸಿದ ಉತ್ಪನ್ನಗಳ ಬೆಲೆಗಳು ಶೇಕಡಾ 0.5ರಷ್ಟು ಹೆಚ್ಚಾಗಿವೆ.
ಆಲೂಗಡ್ಡೆ, ಈರುಳ್ಳಿ ಬೆಲೆ ತೀವ್ರ ಹೆಚ್ಚಳ: ಆಲೂಗಡ್ಡೆ ಮತ್ತು ಈರುಳ್ಳಿ ಹಣದುಬ್ಬರದಲ್ಲಿ ತೀವ್ರ ಏರಿಕೆಯಾಗಿದ್ದು, ಇದು ಮಾರ್ಚ್ನಲ್ಲಿ ಇದ್ದ ಶೇಕಡಾ 53 ಮತ್ತು ಶೇಕಡಾ 57 ರಿಂದ ಕ್ರಮವಾಗಿ ಶೇಕಡಾ 72 ಮತ್ತು ಶೇಕಡಾ 59.8 ಕ್ಕೆ ತಲುಪಿದೆ. ಭತ್ತದ ಹಣದುಬ್ಬರವು ಶೇಕಡಾ 12 ಕ್ಕಿಂತ ಹೆಚ್ಚಾಗಿದೆ.
ಮೊಟ್ಟೆ, ಮಾಂಸ ಮತ್ತು ಮೀನುಗಳ ಬೆಲೆ ಏರಿಕೆಯು ಮಾರ್ಚ್ನಲ್ಲಿ ಇದ್ದ ಶೇಕಡಾ 1.86 ನಷ್ಟು ಕುಸಿತಕ್ಕೆ ಹೋಲಿಸಿದರೆ ಏಪ್ರಿಲ್ನಲ್ಲಿ ಶೇಕಡಾ 0.9 ರಷ್ಟಿದೆ. ಚಿಲ್ಲರೆ ಮಟ್ಟದಲ್ಲಿ, ಮೊಟ್ಟೆಗಳ ಹಣದುಬ್ಬರ ಶೇಕಡಾ 7.1 ರಷ್ಟಿದ್ದರೆ, ಮಾಂಸ ಮತ್ತು ಮೀನಿನ ಬೆಲೆಗಳು ಏಪ್ರಿಲ್ನಲ್ಲಿ ಶೇಕಡಾ 8 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಗೋಧಿ ಮತ್ತು ಹಾಲಿನ ಹಣದುಬ್ಬರವು ಕ್ರಮವಾಗಿ ಶೇಕಡಾ 5.7 ಮತ್ತು ಶೇಕಡಾ 4.3 ಕ್ಕೆ ಇಳಿದಿದೆ. ಹಣ್ಣುಗಳ ಬೆಲೆಗಳು ಕಳೆದ ಏಪ್ರಿಲ್ನಿಂದ ಶೇಕಡಾ 1.8ರಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: ಅಚ್ಚೇ ದಿನ ಆಯೇಗಾ?: $641.6 ಬಿಲಿಯನ್ಗೆ ತಲುಪಿದ ವಿದೇಶಿ ವಿನಿಮಯ ಮೀಸಲು: $3.7 ಶತಕೋಟಿಯಷ್ಟು ಹೆಚ್ಚಳ - FOREX RESERVES