ನವದೆಹಲಿ: ದೇಶದಲ್ಲಿ ಗೋಧಿಯ ಬೆಲೆಗಳು ಏರುಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ವ್ಯಾಪಾರಿಗಳು ಸಂಗ್ರಹಿಸಬಹುದಾದ ಗೋಧಿಯ ಪ್ರಮಾಣದ ಮೇಲೆ ಮಿತಿ ನಿಗದಿಪಡಿಸಿದೆ ಎಂದು ಸೋಮವಾರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಲ್ಲದೆ ಗೋಧಿಯ ಬೆಲೆಗಳನ್ನು ಕಡಿಮೆ ಮಾಡಲು ಸಹಾಯಕವಾಗುವಂತೆ ಗೋಧಿಯ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡಬಹುದು ಅಥವಾ ತೆಗೆದುಹಾಕಬಹುದು ಎಂದು ಅವರು ತಿಳಿಸಿದ್ದಾರೆ. ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾದ ಭಾರತದಲ್ಲಿ ಗೋಧಿ ಬೆಲೆಗಳು ಇತ್ತೀಚೆಗೆ ಪೂರೈಕೆಯ ಕೊರತೆಯಿಂದಾಗಿ ಹೆಚ್ಚುತ್ತಿವೆ.
ಸಗಟು ವ್ಯಾಪಾರಿಗಳಿಗೆ 3,000 ಟನ್, ವೈಯಕ್ತಿಕ ಚಿಲ್ಲರೆ ವ್ಯಾಪಾರಿಗಳಿಗೆ 10 ಟನ್ ಮತ್ತು ಪ್ರತಿ ಮಳಿಗೆಗೆ 10 ಟನ್, ದೊಡ್ಡ ಸರಪಳಿಗಳಿಗೆ ಗರಿಷ್ಠ 3,000 ಟನ್ ಗೋಧಿ ದಾಸ್ತಾನನ್ನು ನಿಗದಿಪಡಿಸಲಾಗಿದೆ.
"ಸ್ಟಾಕ್ ಮಿತಿಗಳನ್ನು ನಿಗದಿಪಡಿಸುವುದು ಹಲವಾರು ನಿಯಂತ್ರಕ ಕ್ರಮಗಳಲ್ಲೊಂದಾಗಿದೆ. ಗೋಧಿ ಬೆಲೆಗಳು ಅಸಮಂಜಸವಾಗಿ ಏರಿಕೆಯಾಗದಂತೆ ನೋಡಿಕೊಳ್ಳಲು ನಾವು ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಲಿದ್ದೇವೆ" ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದರು.
ಗೋಧಿಯ ದಾಸ್ತಾನು ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಗೋಧಿ ಬೆಲೆ ಕಳೆದ ವರ್ಷ ಶೇ 5.5 ರಿಂದ 6ರಷ್ಟು ಏರಿಕೆಯಾಗಿದೆ ಎಂದು ಹೇಳಿದರು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಗಸ್ಟ್ನಲ್ಲಿ ಧಾನ್ಯಗಳ ಗ್ರಾಹಕ ಹಣದುಬ್ಬರವು ಶೇಕಡಾ 8.7 ರಷ್ಟಿತ್ತು.
ಏಪ್ರಿಲ್ ವೇಳೆಗೆ, ರಾಜ್ಯದ ಗೋದಾಮುಗಳಲ್ಲಿ ಗೋಧಿ ದಾಸ್ತಾನು 7.5 ಮಿಲಿಯನ್ ಮೆಟ್ರಿಕ್ ಟನ್ಗಳಿಗೆ ಇಳಿದಿದೆ. ಇದು 16 ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾಗಿದೆ. ಏಪ್ರಿಲ್ 2023ರ ಆರಂಭದಲ್ಲಿ, ಸರ್ಕಾರಿ ಗೋದಾಮುಗಳಲ್ಲಿ 8.2 ಮಿಲಿಯನ್ ಮೆಟ್ರಿಕ್ ಟನ್ ಗೋಧಿಯ ಸಂಗ್ರಹ ಇತ್ತು. ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಹಿಟ್ಟಿನ ಗಿರಣಿಗಳು ಮತ್ತು ಬಿಸ್ಕತ್ತು ತಯಾರಕರಿಗೆ ದಾಖಲೆಯ 10 ಮಿಲಿಯನ್ ಟನ್ಗಳಷ್ಟು ಗೋಧಿಯನ್ನು ಮಾರಾಟ ಮಾಡಿದೆ. ಚಿಲ್ಲರೆ ವ್ಯಾಪಾರಿಗಳು ಮತ್ತು ಇತರ ಮಾರಾಟಗಾರರು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್ ಪಿಡಿ) ನಿರ್ವಹಿಸುವ ಪೋರ್ಟಲ್ ಮೂಲಕ ವಾರಕ್ಕೊಮ್ಮೆ ತಮ್ಮ ಬೆಲೆ ವರದಿಗಳನ್ನು ಸಲ್ಲಿಸಬೇಕಿದೆ.
ಭಾರತವು 2022ರಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಚೋಪ್ರಾ ಅವರ ಪ್ರಕಾರ, ಈ ನಿರ್ಬಂಧವನ್ನು ತೆಗೆದುಹಾಕುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹಾಗೆಯೇ ಸಕ್ಕರೆ ಮತ್ತು ಅಕ್ಕಿಯ ಮೇಲಿನ ರಫ್ತು ನಿರ್ಬಂಧಗಳನ್ನು ಸಡಿಲಗೊಳಿಸುವ ಪ್ರಸ್ತಾವನೆಗಳು ಸಹ ಸರ್ಕಾರದ ಮುಂದೆ ಇಲ್ಲ.
ಇದನ್ನೂ ಓದಿ: ಇನ್ಮುಂದೆ ದುಬಾರಿಯಾಗಲಿವೆ ಹೀರೊ ಬೈಕ್, ಸ್ಕೂಟರ್: ಜುಲೈ 1ರಿಂದಲೇ ಹೊಸ ದರ ಜಾರಿ! - Hero MotoCorp price hike