ನವದೆಹಲಿ: ಭಾರತದ ಪ್ರಮುಖ ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ವಜೀರ್ ಎಕ್ಸ್ ಅನ್ನು ಗುರುವಾರ ಹ್ಯಾಕ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಇದರ ಪರಿಣಾಮವಾಗಿ ಸುಮಾರು 234 ಮಿಲಿಯನ್ ಡಾಲರ್ ಮೌಲ್ಯದ ಡಿಜಿಟಲ್ ಸ್ವತ್ತುಗಳನ್ನು ಬೇರೆ ವಿಳಾಸಕ್ಕೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.
ತನ್ನ ಪ್ಲಾಟ್ಫಾರ್ಮ್ ಹ್ಯಾಕ್ ಆಗಿರುವುದನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಖಚಿತಪಡಿಸಿರುವ ವಜೀರ್ ಎಕ್ಸ್, ಗ್ರಾಹಕರು ತಮ್ಮ ಖಾತೆಯಿಂದ ನಗದು ಹಿಂಪಡೆಯುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. "ನಮ್ಮ ಮಲ್ಟಿ- ಸಿಗ್ ವ್ಯಾಲೆಟ್ಗಳ ಪೈಕಿ ಒಂದು ಹ್ಯಾಕ್ ಆಗಿದೆ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ಘಟನೆಯ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ನಿಮ್ಮ ಸ್ವತ್ತುಗಳ ಸುರಕ್ಷತೆಗಾಗಿ ಭಾರತೀಯ ರೂಪಾಯಿ ಮತ್ತು ಕ್ರಿಪ್ಟೋ ಹಿಂಪಡೆಯುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು" ಎಂದು ಕಂಪನಿ ತಿಳಿಸಿದೆ.
"ನಮ್ಮ ಮಲ್ಟಿ ಸಿಗ್ ವ್ಯಾಲೆಟ್ಗಳ ಪೈಕಿ ಒಂದರ ಮೇಲೆ ಸೈಬರ್ ದಾಳಿ ನಡೆದಿದೆ. ದಾಳಿಯಲ್ಲಿ 230 ಮಿಲಿಯನ್ ಡಾಲರ್ಗಿಂತ ಹೆಚ್ಚು ನಿಧಿಯ ನಷ್ಟ ಉಂಟಾಗಿದೆ" ಎಂದು ಕಂಪನಿ ಹೇಳಿದೆ. ಫೆಬ್ರವರಿ 2023 ರಿಂದ ಲಿಮಿನಾಲ್ನ ಡಿಜಿಟಲ್ ಅಸೆಟ್ ಕಸ್ಟಡಿ ಮತ್ತು ವ್ಯಾಲೆಟ್ ಮೂಲಸೌಕರ್ಯದ ಸೇವೆಗಳನ್ನು ಬಳಸಿಕೊಂಡು ಈ ವ್ಯಾಲೆಟ್ ಅನ್ನು ನಿರ್ವಹಿಸಲಾಗುತ್ತಿದೆ. ವಜೀರ್ ಎಕ್ಸ್ ಪ್ರಕಾರ, ಸೈಬರ್ ದಾಳಿಯು ಲಿಮಿನಾಲ್ನ ಇಂಟರ್ ಫೇಸ್ನಲ್ಲಿ ಪ್ರದರ್ಶಿಸಲಾದ ಡೇಟಾ ಮತ್ತು ವಹಿವಾಟಿನ ನಿಜವಾದ ವಿಷಯಗಳ ನಡುವಿನ ವ್ಯತ್ಯಾಸದಿಂದ ಹುಟ್ಟಿಕೊಂಡಿದೆ.
ಕಳೆದ ಡಿಸೆಂಬರ್ನಲ್ಲಿ ಕ್ರಿಪ್ಟೋ ಎಕ್ಸ್ಚೇಂಜ್ ವಜೀರ್ ಎಕ್ಸ್ ನ ವ್ಯಾಪಾರ ವಹಿವಾಟಿನ ಪ್ರಮಾಣ 1 ಬಿಲಿಯನ್ ಡಾಲರ್ಗೆ ಕುಸಿತವಾಗಿತ್ತು. ಇದು 2022 ಕ್ಕೆ ಹೋಲಿಸಿದರೆ ಶೇಕಡಾ 90 ರಷ್ಟು ಭಾರಿ ಕುಸಿತವಾಗಿದೆ. 2022 ರಲ್ಲಿ, ಭಾರತ ಸರ್ಕಾರವು ವರ್ಚುಯಲ್ ಕರೆನ್ಸಿಗಳ ಮೇಲೆ ಶೇಕಡಾ 30 ರಷ್ಟು ತೆರಿಗೆ ಮತ್ತು ಪ್ರತಿ ಕ್ರಿಪ್ಟೋ ವಹಿವಾಟಿಗೆ ಶೇಕಡಾ 1 ರಷ್ಟು ತೆರಿಗೆಯನ್ನು ಜಾರಿಗೊಳಿಸಿದೆ. ಅದೇ ವರ್ಷದಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (ಪಿಎಂಎಲ್ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳ ಅಡಿ ಹಲವಾರು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದು ಗಮನಾರ್ಹ.
16 ಭಾರತೀಯ ಫಿನ್ಟೆಕ್ ಸಂಸ್ಥೆಗಳು ಮತ್ತು ಸಾಲ ನೀಡುವ ಆ್ಯಪ್ಗಳ ಪರವಾಗಿ ಅಪರಿಚಿತ ವಿದೇಶಿ ವ್ಯಾಲೆಟ್ಗಳಿಗೆ ಹಣ ವರ್ಗಾಯಿಸಿದ್ದ ಪ್ರಕರಣದಲ್ಲಿ ವಜೀರ್ ಎಕ್ಸ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. ನಂತರ ಇದೇ ಪ್ರಕರಣದಲ್ಲಿ ಆಗಸ್ಟ್ 2022 ರಲ್ಲಿ ವಜೀರ್ ಎಕ್ಸ್ನ 64.67 ಕೋಟಿ ರೂ.ಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಅದಾಗಿ ಕೆಲ ದಿನಗಳ ನಂತರ ಇಡಿ ವಜೀರ್ ಎಕ್ಸ್ನ ಖಾತೆಗಳ ನಿರ್ಬಂಧವನ್ನು ಹಿಂತೆಗೆದುಕೊಂಡಿತ್ತು.
ಇದನ್ನೂ ಓದಿ: ಇನ್ಫೊಸಿಸ್ಗೆ 6,368 ಕೋಟಿ ರೂ. ನಿವ್ವಳ ಲಾಭ: 15 ಸಾವಿರ ಹೊಸ ಉದ್ಯೋಗಿಗಳ ನೇಮಕಾತಿಗೆ ಸಿದ್ಧತೆ - Infosys Q1 profit