ನವದೆಹಲಿ: ನಗರದ ಪದೇಶದಲ್ಲಿ 15 ವರ್ಷ ಮತ್ತು ಮೇಲ್ಪಟ್ಟ ಜನರ ನಿರುದ್ಯೋಗ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಇಳಿಕೆಯಾಗಿದೆ. ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ ಶೇ.6.8ರಷ್ಟಿದ್ದ ನಿರುದ್ಯೋಗ ದರ ಈ ವರ್ಷ ಶೇ.6.7ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ತಿಳಿಸಿದೆ.
ನಿರುದ್ಯೋಗ ದರವನ್ನು ಒಟ್ಟು ಕಾರ್ಮಿಕ ಬಲದಲ್ಲಿ ನಿರುದ್ಯೋಗಿಗಳ ಶೇಕಡಾವಾರು ವಿಧಾನದ ಮೂಲಕ ವ್ಯಾಖ್ಯಾನಿಸಲಾಗುತ್ತದೆ.
2023ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿರುದ್ಯೋಗ ದರ ಶೇ.6.8ರಷ್ಟು ದಾಖಲಾಗಿತ್ತು. ಇದೇ ವರ್ಷ ಎರಡನೇ ತ್ರೈಮಾಸಿಕದಲ್ಲಿ ಅಂದರೆ, ಏಪ್ರಿಲ್-ಜೂನ್ನಲ್ಲಿ ಶೇ.6.6 ದಾಖಲಾಗಿದೆ. ಮೂರನೇ ತ್ರೈಮಾಸಿಕದ ಜುಲೈನಿಂದ ಸೆಪ್ಟೆಂಬರ್ನಲ್ಲೂ ಕೂಡ ಶೇ.6.6ರಷ್ಟು ದಾಖಲಾದರೆ, ವರ್ಷದ ಅಂತಿಮ ತ್ರೈಮಾಸಿಕ ದರ (ಅಕ್ಟೋಬರ್ನಿಂದ ಡಿಸೆಂಬರ್ನಲ್ಲಿ) ಶೇ.6.5 ಇತ್ತು.
ಈ ವರ್ಷದ ಮೊದಲ ತ್ರೈಮಾಸಿಕ ದರದಲ್ಲಿ ನಗರ ಪ್ರದೇಶದಲ್ಲಿನ ನಿರುದ್ಯೋಗ ದರ ಶೇ.6.7ರಷ್ಟಿದೆ ಎಂದು 22ನೇ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್ಎಫ್ಎಸ್) ತಿಳಿಸಿದೆ. ಇದರ ಜೊತೆಗೆ ನಗರ ಪ್ರದೇಶದಲ್ಲಿನ ಮಹಿಳಾ ನಿರುದ್ಯೋಗ ದರ ಕಡಿಮೆಯಾಗಿದೆ. ಕಳೆದ ವರ್ಷ ಮೊದಲ ತ್ರೈಮಾಸಿಕದಲ್ಲಿ ಮಹಿಳಾ ನಿರುದ್ಯೋಗ ದರ 9.2 ಇದ್ದರೆ, ಈ ವರ್ಷ 8.5ರಷ್ಟಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ನಗರ ಪ್ರದೇಶದಲ್ಲಿನ ಪುರುಷ ನಿರುದ್ಯೋಗ ದರ ಶೇ.6.1ಕ್ಕೆ ಹೆಚ್ಚಳವಾಗಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ಈ ದರ ಶೇ.6, ಎರಡನೇ ತ್ರೈಮಾಸಿಕದಲ್ಲಿ ಶೇ.5.9, ಮೂರನೇ ತ್ರೈಮಾಸಿಕದಲ್ಲಿ ಶೇ.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.8 ದಾಖಲಾಗಿತ್ತು. ನಗರ ಪ್ರದೇಶಗಳಲ್ಲಿ ಪ್ರಸ್ತುತ ಸಾಪ್ತಾಹಿಕ ಸ್ಥಿತಿಯಲ್ಲಿ ಕಾರ್ಮಿಕ ಬಲದ ಭಾಗವಹಿಸುವಿಕೆ ದರ ಈ ವರ್ಷದ ತ್ರೈಮಾಸಿಕದಲ್ಲಿ ಶೇ.50.2ಕ್ಕೆ ಏರಿಕೆ ಕಂಡಿದೆ. ಕಳೆದ ವರ್ಷ ಇದು ಶೇ.48.5ರಷ್ಟಿತು. ಕಾರ್ಮಿಕ ಬಲ ನಿರುದ್ಯೋಗಿಗಳು ಮತ್ತು ಉದ್ಯೋಗಿಗಳನ್ನು ಒಳಗೊಂಡಿದೆ.(ಐಎಎನ್ಎಸ್)
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಿರುದ್ಯೋಗ ದರ ಶೇ.5.2 ರಿಂದ 4ಕ್ಕೆ ಇಳಿಕೆ: ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ