ಮುಂಬೈ: ಗುರುರಾಯರ ವಾರ ಗುರುವಾರವಾದ ಇಂದು ಷೇರುಪೇಟೆ ಹೂಡಿಕೆದಾರರ ಎದೆಯನ್ನೇ ನಡುಗಿಸಿದೆ. ಲಕ್ಷಾಂತರ ಕೋಟಿ ಕಳೆದುಕೊಂಡ ಹೂಡಿಕೆದಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿರುವ ಪರಿಸ್ಥಿತಿ ಬಂದೊದಗಿದೆ. ಬಿಎಸ್‌ಇ ಸೆನ್ಸೆಕ್ಸ್ 72,500 ಮಟ್ಟಕ್ಕಿಂತ ಕೆಳಗಿಳಿಯುವುದರೊಂದಿಗೆ ಏರುಮಟ್ಟದಲ್ಲಿ ಸಾಗುತ್ತಿದ್ದ ಪೇಟೆಗೆ ದೊಡ್ಡ ಬ್ರೇಕ್ ಹಾಕಿದೆ. ಇನ್ನು ನಿಫ್ಟಿ 22,000ರ ಅಂಕಗಳಿಗಿಂತ ಕೆಳಗಿಳಿಯುವುದರೊಂದಿಗೆ, ಷೇರುಪೇಟೆಯಲ್ಲಿ 'ಅನಿಶ್ಚಿತತೆ' ಉಂಟಾಗುತ್ತಿದೆ. ಜಾಗತಿಕ ಮಾರುಕಟ್ಟೆ ಹಾಗೂ ವಿದ್ಯಮಾನಗಳು ಹೂಡಿಕೆದಾರರಲ್ಲಿ ಮಾರಾಟದ ಒತ್ತಡವನ್ನು ತೀವ್ರಗೊಳಿಸಿವೆ. ಅಲ್ಪಾವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಈ ಪ್ರವೃತ್ತಿ ಮುಂದುವರಿಯಬಹುದು ಎಂದು ಇದೇ ವೇಳೆ ವಿಶ್ಲೇಷಕರು ಎಚ್ಚರಿಕೆ ಕೂಡಾ ನೀಡಿದ್ದಾರೆ.
ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ಇಂದು 400 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ. Q4 ಫಲಿತಾಂಶ ಹಾಗೂ ಮತ್ತು ಚುನಾವಣಾ ಅನಿಶ್ಚಿತತೆಯ ವಾತಾವರಣ ಹೂಡಿಕೆದಾರರು ತಮ್ಮ ಹೂಡಿಕೆ ಹಿಂಪಡೆಯಲು ಕಾರಣವಾಗಿದೆ. ಚಂಚಲತೆ ಸೂಚ್ಯಂಕ (VIX) ಹನ್ನೊಂದನೇ ನೇರ ಅವಧಿಗೆ 18.20 ಮಟ್ಟಕ್ಕೆ ಅಂದರೆ ಶೇ 6.5ರಷ್ಟು ಏರಿಕೆ ದಾಖಲಿಸಿದೆ.
ಷೇರು ಮಾರುಕಟ್ಟೆ ಕುಸಿದಿದ್ದಾರೂ ಏಕೆ?: ಭಾರತೀಯ ಷೇರು ಮಾರುಕಟ್ಟೆ ಕುಸಿತದ ಬಗ್ಗೆ ಮಾತನಾಡಿರುವ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥ ದೀಪಕ್ ಜಸಾನಿ, "ಚುನಾವಣೆ ಬಗೆಗಿನ ಸುದ್ದಿಗಳು, ಹಾಗೂ ಮತದಾನದ ಪ್ರಮಾಣದಲ್ಲಿನ ಕುಸಿತ ಹಾಗೂ ಪ್ರಸ್ತುತ ಸರ್ಕಾರವೇ ಅಧಿಕಾರಕ್ಕೆ ಬರುತ್ತದೋ ಇಲ್ಲವೋ ಎಂಬ ಅನುಮಾನಗಳಿಂದಾಗಿ ಸಾಂಸ್ಥಿಕ ಮಾರಾಟ ತೀವ್ರಗೊಂಡಿದ್ದರಿಂದ ನಿಫ್ಟಿ ತೀವ್ರವಾಗಿ ಕುಸಿದಿದೆ. ನಿಫ್ಟಿ ಶೇ1.55 ಅಥವಾ 345 ಪಾಯಿಂಟ್‌ಗಳು ಕುಸಿತ ಕಾಣುವ ಮೂಲಕ 21957.8 ವಹಿವಾಟು ಕೊನೆಗೊಳಿಸಿದೆ.
ಭಾರತೀಯ ಸೂಚ್ಯಂಕಗಳ ಇಳಿಕೆ: ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ಇಳಿಕೆಯ ಕಾರಣದ ಒಂದು ಭಾಗವಾದರೆ, ವಿದೇಶಿ ಬಂಡವಾಳ ಹೂಡಿಕೆದಾರರು ನಿರಂತರ ಮಾರಾಟದಲ್ಲಿ ತೊಡಗಿರುವುದು ಪೇಟೆಯ ಕುಸಿತಕ್ಕೆ ದೊಡ್ಡದಾದ ಪಾಲು ನೀಡಿದೆ. ಇನ್ನು ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳು, ಅಮೆರಿಕದ ಫೆಡ್ನ ಮುಂಬರುವ ನಿರ್ಣಯಗಳ ಭೀತಿ, ಚಂಚಲತೆ ಸೂಚ್ಯಂಕ (VIX)ದಲ್ಲಿನ ಏರಿಕೆಗಳು ಇತ್ತೀಚಿನ ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದಾರೆ.
ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅವರು ಹೇಳುವಂತೆ, " ಮಾರುಕಟ್ಟೆ ಈ ವಾರ ಭಾರಿ ಚಂಚಲತೆಗೆ ಸಾಕ್ಷಿಯಾಗಿದೆ. ನಾಲ್ಕನೇ ತ್ರೈಮಾಸಿಕದ ಕಂಪನಿಗಳ ಗಳಿಕೆಗಳು ಮತ್ತು ಸಾರ್ವತ್ರಿಕ ಚುನಾವಣೆಯ ಅನಿಶ್ಚಿತತೆಗಳು ಮಾರುಕಟ್ಟೆಯಲ್ಲಿ ವಲಾಟಿಲಿಟಿ( ಚಂಚಲತೆ)ಗೆ ಕಾರಣವಾಗಿದೆ. ಇದು ಹೂಡಿಕೆದಾರರು ತಮ್ಮ ಷೇರುಗಳ ಮಾರಾಟಕ್ಕೆ ತಿದಿ ಒತ್ತುತ್ತಿದೆ. ಅಲ್ಪಾವಧಿಯಲ್ಲಿ ಇದೇ ಪ್ರವೃತ್ತಿ ಮುಂದುವರೆಯುವ ಸಾಧ್ಯತೆಗಳಿವೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಬ್ಯಾಂಕ್ ಆಫ್ ಇಂಗ್ಲೆಂಡ್ ನೀತಿ ಸಭೆ ಮತ್ತು ಮುಂದಿನ ವಾರ US ಹಣದುಬ್ಬರ ಅಂಕಿ- ಅಂಶಗಳಗಳಿಂದಾಗಿ ಈ ಎಲ್ಲ ಬೆಳವಣಿಗೆಗಳು ನಡೆದಿವೆ ಎಂದು ಅವರು ವಿವರಣೆ ನೀಡಿದ್ದಾರೆ.
ವಿದೇಶಿ ಹೂಡಿಕೆದಾರರಿಂದ ಭಾರಿ ಮಾರಾಟ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮೇ 2024 ರಲ್ಲಿ ಎಲ್ಲ ತಿಂಗಳಲ್ಲೂ ಭಾರಿ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂದಿನ ಮಾರುಕಟ್ಟೆ ವಹಿವಾಟಿನವರೆಗೂ ಸುಮಾರು 15,863 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಷ್ಟೇ ಅಲ್ಲ ಫ್ಯೂಚರ್ & ಆಪ್ಷನ್ (F&O) ವಿಭಾಗದಲ್ಲೂ 5,292 ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.
ಹಾಕಿಶ್ ಯುಎಸ್ ಫೆಡ್: ಇತ್ತೀಚೆಗೆ ಕೆಲವು ಯುಎಸ್ ಫೆಡ್ ಅಧಿಕಾರಿಗಳು ಹಾಕಿಶ್ ಮಾತುಕತೆಗಳು, ಭಾರತೀಯ ಷೇರು ಮಾರುಕಟ್ಟೆ ಮೇಲೆ ಹೆಚ್ಚುವರಿ ಒತ್ತಡ ಸೃಷ್ಟಿಯಾಗುವಂತೆ ಮಾಡಿವೆ. ಈ ತಿಂಗಳ ಆರಂಭದಲ್ಲಿ ಕೆಲವು ಹೂಡಿಕೆದಾರರು ಲಾಭದ ಬುಕಿಂಗ್ ಮಾಡಿದ್ದಾರೆ. ಇನ್ನು ಏರುತ್ತಿರುವ US ಡಾಲರ್ ಮೌಲ್ಯ, US ಖಜಾನೆ ತುಂಬುವುದಕ್ಕೆ ಉತ್ತೇಜನ ನೀಡಿದೆ. ಇದು ಹೂಡಿಕೆದಾರರು ಈಕ್ವಿಟಿ ಮತ್ತು ಇತರ ಸ್ವತ್ತುಗಳಿಂದ ಕರೆನ್ಸಿ ಮತ್ತು ಖಜಾನೆ ಮಾರುಕಟ್ಟೆಗಳಿಗೆ ಹಣವನ್ನು ಬದಲಾಯಿಸುವ ನಿರೀಕ್ಷೆಯಿದೆ.
"ಬ್ಯಾಂಕ್ ಆಫ್ ಇಂಗ್ಲೆಂಡ್‌ನ ನೀತಿ ನಿರ್ಧಾರದಿಂದಾಗಿ ಗುರುವಾರ ವಿಶ್ವ ಷೇರುಗಳು ಹೆಚ್ಚಾಗಿ ಕುಸಿತ ಕಂಡಿವೆ. ಚೀನಾ ಏಪ್ರಿಲ್‌ನಲ್ಲಿ ನಿರೀಕ್ಷಿತ ವ್ಯಾಪಾರ ಅಂಕಿ - ಅಂಶಗಳನ್ನು ವರದಿ ಮಾಡಿದೆ. ಆ ಬಳಿಕ ಚೀನಾದ ಷೇರುಪೇಟೆಯಲ್ಲಿ ಏರಿಕೆ ಕಂಡು ಬಂದಿದೆ. ಹಿಂದಿನ ವರ್ಷಕ್ಕಿಂತ ಏಪ್ರಿಲ್‌ನಲ್ಲಿ 1.5 ರಷ್ಟು ರಫ್ತು ಏರಿಕೆ ಕಂಡು ಬಂದಿದೆ. ಇದು ಚೀನಾ ಆರ್ಥಿಕತೆಯ ಚೇತರಿಕೆಯನ್ನು ತೋರಿಸುತ್ತಿದೆ.
ಮ್ಯೂಚುವಲ್ ಫಂಡ್‌ಗಳ ಒಳಹರಿವಿನಲ್ಲಿ ಕುಸಿತ: ಭಾರತೀಯ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳ ಒಳಹರಿವು ಏಪ್ರಿಲ್‌ನಲ್ಲಿ 16.42 ಶೇಕಡಾ ಕುಸಿದು 18,917.08 ಕೋಟಿ ರೂಪಾಯಿಗಳಿಗೆ ತಲುಪಿದೆ. ಮಾರ್ಚ್ ತಿಂಗಳಲ್ಲಿ ಮ್ಯೂಚುವಲ್ ಫಂಡ್ಗಳಲ್ಲಿ ಸುಮಾರು 20 ಸಾವಿರ ಕೋಟಿ ರೂ ಹೂಡಿಕೆ ಮಾಡಿದ್ದರು. ಇನ್ನು ಏಪ್ರಿಲ್ ನಲ್ಲಿ ಈ ಪ್ರಮಾಣ 12 371 ಕೋಟಿಗೆ ಏರಿಕೆ ಆಗುತ್ತು. ಆದರೆ ಮೇ ತಿಂಗಳಲ್ಲಿ ಈ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿರುವುದು ಕೂಡಾ ಪೇಟೆ ಕುಸಿತಕ್ಕೆ ಕಾರಣವಾಗಿದೆ.
ಇದನ್ನು ಓದಿ: ಸತತ ನಾಲ್ಕನೇ ದಿನವೂ ಕುಸಿದ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಯಾರಿಗೆ ಲಾಭ-ನಷ್ಟ? - STOCK MARKET