ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಬಹು ಸರಕು ವಿನಿಮಯ ಕೇಂದ್ರದಲ್ಲಿ (Multi Commodity Exchange- ಎಂಸಿಎಕ್ಸ್) ಮಂಗಳವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಜೂನ್ 5, 2024 ರಂದು ಮುಕ್ತಾಯಗೊಳ್ಳುವ ಗೋಲ್ಡ್ ಫ್ಯೂಚರ್ಸ್ ಎಂಸಿಎಕ್ಸ್ನಲ್ಲಿ 10 ಗ್ರಾಂಗೆ 72,813 ರೂ.ಗೆ ತಲುಪಿದೆ. ಇದು ಹಿಂದಿನ ದಿನದ ಮುಕ್ತಾಯದ 72,277 ರೂ.ಗಿಂತ 536 ರೂ ಅಥವಾ ಶೇಕಡಾ 0.74 ರಷ್ಟು ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ನ್ಯೂಯಾರ್ಕ್ನಲ್ಲಿ ಚಿನ್ನದ ಬೆಲೆ ಶೇಕಡಾ 0.16 ರಷ್ಟು ಏರಿಕೆಯಾಗಿ ಔನ್ಸ್ಗೆ 2,386.8 ಡಾಲರ್ಗೆ ತಲುಪಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರೂ. ಏರಿಕೆಯಾಗಿ 73,000 ರೂ. ಹಾಗೂ ಅಪರಂಜಿ 10 ಗ್ರಾಂಗೆ 100 ರೂ. ಏರಿಕೆಯಾಗಿ 78,000 ರೂ.ಗೆ ತಲುಪಿದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 73,310 ರೂ. ದಾಖಲಾಗಿದೆ.
ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 74130 ರೂ ಆಗಿದೆ. ಇನ್ನು ಒಂದು ಕೆಜಿ ಬೆಳ್ಳಿಗೆ ನಿನ್ನೆ 84650 ರಿಂದ 84750 ರೂ ಗೆ ಏರಿಕೆ ಕಂಡಿದೆ. ಇಂದು 100 ರೂಪಾಯಿ ಹೆಚ್ಚಳವಾಗಿದೆ.
"ಇತ್ತೀಚಿನ ಇರಾನ್-ಇಸ್ರೇಲ್ ಸಂಘರ್ಷವು ಹಳದಿ ಲೋಹದ ಬೆಲೆಗಳು ದಾಖಲೆಯ ಏರಿಕೆಗೆ ಕಾರಣವಾಗಿದೆ. ಇದು ಹೂಡಿಕೆದಾರರು ಅಪಾಯಕಾರಿ ಹೂಡಿಕೆಗಳಿಂದ ಹಿಂದೆ ಸರಿಯಲು ಮತ್ತು ಚಿನ್ನದ ಮೇಲೆ ಮರು ಹೂಡಿಕೆ ಮಾಡಲು ಕಾರಣವಾಗಿದೆ." ಎಂದು ಕಾಮಾ ಜ್ಯುವೆಲ್ಲರಿ ಎಂಡಿ ಕಾಲಿನ್ ಶಾ ಹೇಳಿದ್ದಾರೆ.
"ಚಿನ್ನದ ವ್ಯಾಪಾರ ವಹಿವಾಟು ನೋಡುವುದಾದರೆ- ಕಚ್ಚಾ ಬೆಲೆಗಳ ಹೆಚ್ಚಳ ಮತ್ತು ಯುದ್ಧ ಸ್ಥಿತಿಯಿಂದಾಗಿ ಭಾರತದಿಂದ ಆಭರಣ ರಫ್ತು ಮತ್ತಷ್ಟು ನಿಧಾನವಾಗಲಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಅಂತಿಮ ಬಳಕೆದಾರ ಮನಸಿನಲ್ಲಿ ನಕಾರಾತ್ಮಕ ಭಾವನೆ ಮೂಡಿಸುತ್ತದೆ" ಎಂದು ಅವರು ಹೇಳಿದರು.
ಈ ಬಗ್ಗೆ ಮಾತನಾಡಿದ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ನ ನವನೀತ್ ದಮಾನಿ, "ಚಿನ್ನ ಮತ್ತು ಡಾಲರ್ ಸೂಚ್ಯಂಕಗಳು ಈಗ ಒಟ್ಟಾಗಿ ಚಲಿಸುತ್ತಿವೆ. ಇದನ್ನು ನೋಡಿದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬಡ್ಡಿದರಗಳ ಬದಲಾವಣೆಗಿಂತ ಭೌಗೋಳಿಕ ಯುದ್ಧ ಪರಿಸ್ಥಿತಿಯ ಮೇಲೆ ಮಾರುಕಟ್ಟೆಗಳ ಗಮನವಿರುವುದು ಸ್ಪಷ್ಟವಾಗುತ್ತದೆ" ಎಂದು ಹೇಳಿದರು.
ಶನಿವಾರದಂದು ಇರಾನ್ ಇಸ್ರೇಲ್ ಮೇಲೆ 300 ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿತ್ತು. ಇದರಲ್ಲಿ ಬಹುತೇಕ ಕ್ಷಿಪಣಿಗಳನ್ನು ಇಸ್ರೇಲ್ ಆಕಾಶದಲ್ಲಿಯೇ ಹೊಡೆದುರುಳಿಸಿತ್ತು. ಸದ್ಯ ಈ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾತೈಲ ಬೆಲೆಗಳು ಸಹ ಹೆಚ್ಚಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ : ಆತಂಕದ ಸುದ್ದಿ: ಶೇ 10ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಿದೆ ಟೆಸ್ಲಾ - TESLA