ನವದೆಹಲಿ : ದೆಹಲಿಯಲ್ಲಿ ಈ ವರ್ಷ ಬೀಸಿದ ಭೀಕರ ಬಿಸಿಗಾಳಿಯ ಹೊಡೆತದಿಂದಾಗಿ ಬೀದಿ ಬದಿ ವ್ಯಾಪಾರಿಗಳು ಆದಾಯ ನಷ್ಟಕ್ಕೀಡಾಗಿ ವಿಪರೀತ ಹೈರಾಣಾಗಿದ್ದಾರೆ ಎಂದು ಥಿಂಕ್ ಟ್ಯಾಂಕ್ ಸಂಸ್ಥೆಯಾಗಿರುವ ಗ್ರೀನ್ ಪೀಸ್ ಇಂಡಿಯಾ ಮತ್ತು ನ್ಯಾಷನಲ್ ಹಾಕರ್ ಫೆಡರೇಶನ್ನ ಹೊಸ ವರದಿ ತಿಳಿಸಿದೆ. ಹೀಟ್ ವೇವ್ನಿಂದಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತೀರಾ ಕಡಿಮೆ ವ್ಯಾಪಾರವಾಗಿದೆ ಎಂದು ಬೀದಿಬದಿ ವ್ಯಾಪಾರಿಗಳು ಹೇಳಿಕೊಂಡಿದ್ದಾರೆ. ಜೊತೆಗೆ ಈ ಅವಧಿಯಲ್ಲಿ ದೆಹಲಿಯ ಶೇ 50ರಷ್ಟು ಬೀದಿ ಬದಿ ವ್ಯಾಪಾರಿಗಳಿಗೆ ಗಮನಾರ್ಹ ಆದಾಯ ನಷ್ಟವಾಗಿದೆ ಎಂದು ವರದಿ ಹೇಳಿದೆ.
ಮೀನಾ ಬಜಾರ್, ಹಳೆ ದೆಹಲಿ ರೈಲ್ವೆ ನಿಲ್ದಾಣ ಪ್ರದೇಶ, ಕೆಂಪು ಕೋಟೆ ಪ್ರದೇಶ, ನೆಹರು ಪ್ಲೇಸ್, ಗುರು ತೇಜ್ ಬಹದ್ದೂರ್ ನಗರ, ಕರೋಲ್ ಬಾಗ್, ಇಂಡಿಯಾ ಗೇಟ್, ಜನಪಥ್, ಚಾಂದನಿ ಚೌಕ್, ಸದರ್ ಬಜಾರ್ ರಸ್ತೆ, ಸಾಕೇತ್, ಸರೋಜಿನಿ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 721 ಬೀದಿ ಬದಿ ವ್ಯಾಪಾರಿಗಳನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ
"ಸಮೀಕ್ಷೆಗೆ ಒಳಪಡಿಸಲಾದ 700 ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳ ಪ್ರತಿಕ್ರಿಯೆಗಳು ಅವರ ಆರೋಗ್ಯ, ಉತ್ಪಾದಕತೆ ಮತ್ತು ಜೀವನೋಪಾಯದ ಮೇಲೆ ಹೀಟ್ವೇವ್ನ ವಿನಾಶಕಾರಿ ಪರಿಣಾಮವನ್ನು ಎತ್ತಿ ತೋರಿಸಿದೆ. ಈ ಸಂಕಷ್ಟದಿಂದ ಪಾರಾಗಲು ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯ, ಸುರಕ್ಷತಾ ಕಿಟ್ಗಳು ಮತ್ತು ಅತ್ಯಂತ ದುರ್ಬಲರಿಗೆ ಸರ್ಕಾರದ ಸಹಾಯದಿಂದ ಮಾರುಕಟ್ಟೆಗಳಲ್ಲಿ ನೆರಳಿನ ಆಶ್ರಯ ತಾಣಗಳನ್ನು ಸ್ಥಾಪಿಸುವುದು ಸೇರಿದಂತೆ ತಕ್ಷಣವೇ ಸರ್ಕಾರ ಸಹಾಯಕ್ಕೆ ನಿಲ್ಲಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ಫೆಡರೇಶನ್ನ ದೆಹಲಿ ಸಂಚಾಲಕ ಸಂದೀಪ್ ವರ್ಮಾ ಹೇಳಿದರು.
ಶೇ 80.08ರಷ್ಟು ಬೀದಿ ಬದಿ ವ್ಯಾಪಾರಿಗಳು ಬಿಸಿಗಾಳಿ ಸಮಯದಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದಾರೆ. ಇವರಲ್ಲಿ 49.27 ಪ್ರತಿಶತದಷ್ಟು ವ್ಯಾಪಾರಿಗಳು ತೀವ್ರ ಹವಾಮಾನ ಪರಿಸ್ಥಿತಿಗಳಿಂದಾಗಿ ಆದಾಯ ನಷ್ಟ ಅನುಭವಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಬಿಸಿಗಾಳಿಯಿಂದಾಗಿ ಅನಾರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿವೆ ಎಂದು ಬಹುತೇಕ ವ್ಯಾಪಾರಿಗಳು ಹೇಳಿಕೊಂಡಿದ್ದಾರೆ. ಶೇ .73.44ರಷ್ಟು ಮಂದಿ ಕಿರಿಕಿರಿ, ಶೇ 66.93ರಷ್ಟು ಮಂದಿ ತಲೆನೋವು, ಶೇ 67.46ರಷ್ಟು ನಿರ್ಜಲೀಕರಣ, ಶೇ 66.53ರಷ್ಟು ಮಂದಿ ಬಿಸಿಲಿನ ತಾಪ, ಶೇ 60.82ರಷ್ಟು ಮಂದಿ ಆಯಾಸ ಹಾಗೂ ಶೇ 57.37ರಷ್ಟು ಮಂದಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.
ಸಮೀಕ್ಷೆಯಲ್ಲಿ ಸಂದರ್ಶಿಸಲಾದ ಪ್ರತಿ ಎಂಟು ಮಹಿಳಾ ಬೀದಿ ಬದಿ ವ್ಯಾಪಾರಿಗಳ ಪೈಕಿ ಏಳು ಜನ ಅಧಿಕ ರಕ್ತದೊತ್ತಡದ ಸಮಸ್ಯೆ ಎದುರಿಸಿದ್ದಾರೆ. ಹಾಗೆಯೇ ಮಧ್ಯಮ ವಯಸ್ಸಿನ ವ್ಯಾಪಾರಿ ಮಹಿಳೆಯರು ತೀವ್ರ ಶಾಖದಿಂದಾಗಿ ತಮ್ಮ ಋತುಚಕ್ರದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಿದ ಶಾಖದಿಂದಾಗಿ ರಾತ್ರಿಯಲ್ಲಿ ನಿದ್ರಾಹೀನತೆ ಕಾಣಿಸಿಕೊಳ್ಳುತ್ತಿದೆ ಮತ್ತು ಇದು ದಿನವಿಡೀ ಬಳಲಿಕೆಗೆ ಕಾರಣವಾಗುತ್ತಿದೆ ಎಂದು ಬಹುತೇಕ ಮಹಿಳಾ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರತದ ಹಲವಾರು ಭಾಗಗಳಲ್ಲಿ ತೀವ್ರ ಮತ್ತು ದೀರ್ಘಕಾಲದ ಹೀಟ್ ವೇವ್ ಕಾಣಿಸಿಕೊಂಡಿತ್ತು. ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹೀಟ್ ವೇವ್ನಿಂದಾಗಿ ಹಲವಾರು ಜನ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ : ಸಾಫ್ಟ್ವೇರ್, ಹಾರ್ಡ್ವೇರ್ ಉದ್ಯಮದಲ್ಲಿ ಫ್ರೆಶರ್ಸ್ಗಳ ನೇಮಕಾತಿಗೆ ಆದ್ಯತೆ: ವರದಿ - Hiring in India