ಮುಂಬೈ : ಭಾರತದ ಪ್ರಮುಖ ಷೇರು ಸೂಚ್ಯಂಕಗಳಾದ ನಿಫ್ಟಿ-50 ಮತ್ತು ಸೆನ್ಸೆಕ್ಸ್ ಜನವರಿ 25 ರ ಗುರುವಾರದಂದು ತಲಾ ಶೇಕಡಾ ಅರ್ಧದಷ್ಟು ಕುಸಿದವು. ಹೆಚ್ಚಿನ ಷೇರುಗಳಲ್ಲಿ ಲಾಭದ ಬುಕ್ಕಿಂಗ್ ಆರಂಭವಾದ ನಂತರ ಮಾರುಕಟ್ಟೆಯಲ್ಲಿ ಇಳಿಕೆ ಕಂಡು ಬಂದಿದೆ.
ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 101 ಅಂಕ ಅಥವಾ ಶೇಕಡಾ 0.47 ರಷ್ಟು ಕುಸಿದು 21,352.60 ಪಾಯಿಂಟ್ಗಳಿಗೆ ಕೊನೆಗೊಂಡಿದೆ ಮತ್ತು ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ 359 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 70,700.67 ರಲ್ಲಿ ಕೊನೆಗೊಂಡಿದೆ. ರಜಾ ದಿನಗಳು ಹೆಚ್ಚಾಗಿರುವ ಈ ವಾರದ ಮೂರು ದಿನಗಳಲ್ಲಿ ಎರಡೂ ಸೂಚ್ಯಂಕಗಳು ತಲಾ 1.3 ಪ್ರತಿಶತದಷ್ಟು ಕುಸಿದಿವೆ. ಅಕ್ಟೋಬರ್ 27 ಕ್ಕೆ ಕೊನೆಗೊಂಡ ವಾರದ ನಂತರದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ. ಗಣರಾಜ್ಯೋತ್ಸವದ ನಿಮಿತ್ತ ಮಾರುಕಟ್ಟೆ ಶುಕ್ರವಾರ ಬಂದ್ ಆಗಿರಲಿದೆ.
ಮಾಧ್ಯಮ ಷೇರುಗಳು ಈ ವಾರ ಶೇಕಡಾ 9.93 ರಷ್ಟು ಕುಸಿತ ಕಂಡವು. ಇದು ಕೋವಿಡ್ -19ರ ಸಾಂಕ್ರಾಮಿಕದ ನಂತರ ಅಂದರೆ ಮಾರ್ಚ್ 2020 ರ ನಂತರದ ಗರಿಷ್ಠ ಕುಸಿತವಾಗಿದೆ. ಸೋನಿಯೊಂದಿಗಿನ 10 ಬಿಲಿಯನ್ ಡಾಲರ್ ವಿಲೀನ ಒಪ್ಪಂದದ ಕುರಿತಂತೆ ನಡೆಯುತ್ತಿರುವ ಜಟಾಪಟಿಯ ಸುದ್ದಿಗಳ ನಂತರ ಜೀ ಎಂಟರ್ಟೈನ್ ಮೆಂಟ್ ಷೇರು ಶೇಕಡಾ 30.55 ರಷ್ಟು ಕುಸಿತ ಕಂಡಿವೆ.
13 ಪ್ರಮುಖ ವಲಯಗಳ ಪೈಕಿ ಏಳು ವಲಯಗಳು ನಷ್ಟ ಅನುಭವಿಸಿದ್ದು, ಐಟಿ ಸೂಚ್ಯಂಕ ಶೇ 1.60ರಷ್ಟು ಕುಸಿದಿದೆ. ಇನ್ನು ಕಂಪನಿ ನಿರೀಕ್ಷೆಗಿಂತ ಕಡಿಮೆ ತ್ರೈಮಾಸಿಕ ಲಾಭವನ್ನು ದಾಖಲಿಸಿದ ನಂತರ, ಟೆಕ್ ಮಹೀಂದ್ರಾ ಷೇರುಗಳು ಶೇಕಡಾ 6.1 ರಷ್ಟು ಕುಸಿತ ಕಂಡಿವೆ. ಮತ್ತೊಂದೆಡೆ, ಬಜಾಜ್ ಆಟೋ ಹೆಚ್ಚಿನ ಲಾಭ ಗಳಿಸಿವೆ.
ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ರೂಪಾಯಿ ಗುರುವಾರ ಅಮೆರಿಕದ ಡಾಲರ್ ವಿರುದ್ಧ 1 ಪೈಸೆ ಏರಿಕೆಯಾಗಿ 83.11 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಸ್ಥಳೀಯ ರೂಪಾಯಿ ಡಾಲರ್ ವಿರುದ್ಧ 83.13 ರಲ್ಲಿ ಪ್ರಾರಂಭವಾಯಿತು. ರೂಪಾಯಿ 83.14ರ ಕನಿಷ್ಠ ಮತ್ತು 83.08ರ ಗರಿಷ್ಠ ಮಟ್ಟಗಳ ನಡುವೆ ಏರಿಳಿತಗೊಂಡಿತು ಮತ್ತು ಅಂತಿಮವಾಗಿ ಡಾಲರ್ ವಿರುದ್ಧ 83.11 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ಹೆಚ್ಚಾಗಿದೆ.
ಇದನ್ನೂ ಓದಿ : ಸ್ವಿಗ್ಗಿ ಪ್ಲಾಟ್ಫಾರ್ಮ್ ಶುಲ್ಕ ಹೆಚ್ಚಳ ಸಾಧ್ಯತೆ?