ನವದೆಹಲಿ : ಭಾರತೀಯ ಸ್ಟಾರ್ಟ್ಅಪ್ಗಳು ಕಳೆದ ವಾರ 21 ಡೀಲ್ಗಳ ಮೂಲಕ ಸುಮಾರು 202 ಶತಕೋಟಿ ಡಾಲರ್ ಫಂಡಿಂಗ್ (ಬಂಡವಾಳ ನಿಧಿ ಸಂಗ್ರಹಣೆ) ಪಡೆದುಕೊಂಡಿವೆ ಎಂದು ವರದಿ ತಿಳಿಸಿದೆ. ಅದಕ್ಕೂ ಹಿಂದಿನ ವಾರದಲ್ಲಿ ಭಾರತೀಯ ಸ್ಟಾರ್ಟ್ಅಪ್ಗಳು 10 ಡೀಲ್ಗಳ ಮೂಲಕ ಸಂಗ್ರಹಿಸಿದ್ದ ಸುಮಾರು 98 ಮಿಲಿಯನ್ ಡಾಲರ್ ಫಂಡಿಂಗ್ಗೆ ಹೋಲಿಸಿದರೆ ಇದು ಶೇಕಡಾ 100 ಕ್ಕಿಂತ ಹೆಚ್ಚಾಗಿದೆ.
ಕ್ಲೀನ್ಟೆಕ್ ಸ್ಟಾರ್ಟ್ಅಪ್ಗಳು ನಿಧಿ ಸಂಗ್ರಹಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಇವಿ ಸ್ಟಾರ್ಟ್ಅಪ್ ಆಗಿರುವ ಬ್ಯಾಟರಿ ಸ್ಮಾರ್ಟ್ (Battery Smart) ಕಂಪನಿಯು ಲೀಪ್ ಫ್ರಾಗ್ ಇನ್ವೆಸ್ಟ್ಮೆಂಟ್ನಿಂದ 65 ಮಿಲಿಯನ್ ಡಾಲರ್ ಬಂಡವಾಳ ನಿಧಿ ಸಂಗ್ರಹಿಸಿದೆ.
ಈಕ್ವಿಟಿ ಸುತ್ತಿನಲ್ಲಿ ಎಂಯುಎಫ್ಜಿ ಬ್ಯಾಂಕ್, ಪ್ಯಾನಾಸೋನಿಕ್, ಇಕೋಸಿಸ್ಟಮ್ ಇಂಟೆಗ್ರಿಟಿ ಫಂಡ್, ಬ್ಲೂಮ್ ವೆಂಚರ್ಸ್ ಮತ್ತು ಬ್ರಿಟಿಷ್ ಇಂಟರ್ ನ್ಯಾಷನಲ್ ಇನ್ವೆಸ್ಟ್ ಮೆಂಟ್ ಸೇರಿದಂತೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆ ಕಂಪನಿಗಳು ಭಾರತೀಯ ಸ್ಟಾರ್ಟ್ಅಪ್ಗಳಲ್ಲಿ ಈ ವಾರ ಹೊಸದಾಗಿ ಹೂಡಿಕೆ ಮಾಡಿವೆ.
ಡೈರೆಕ್ಟ್-ಟು-ಕನ್ಸ್ಯೂಮರ್ (ಡಿ 2 ಸಿ) ಚರ್ಮದ ಆರೈಕೆ ಸಂಸ್ಥೆ ಫಾಕ್ಸ್ ಟೇಲ್ (Foxtale) ಸಿಂಗಾಪುರ ಮೂಲದ ಪ್ಯಾಂಥೆರಾ ಗ್ರೋತ್ ಪಾರ್ಟನರ್ಸ್ ನೇತೃತ್ವದ ಸುತ್ತಿನಲ್ಲಿ 18 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ.
ಮತ್ತೊಂದು ಸೌಂದರ್ಯ ಮತ್ತು ಮೇಕಪ್ ಬ್ರಾಂಡ್ ಕಂಪನಿಯಾಗಿರುವ ರೆನೀ ಕಾಸ್ಮೆಟಿಕ್ಸ್, ಅಸ್ತಿತ್ವದಲ್ಲಿರುವ ಹೂಡಿಕೆದಾರರಾದ ಎವಾಲ್ವೆನ್ಸ್ ಇಂಡಿಯಾ ಮತ್ತು ಎಡೆಲ್ವೀಸ್ ಗ್ರೂಪ್ ನೇತೃತ್ವದ ಸರಣಿ ಬಿ ಫಂಡಿಂಗ್ ಸುತ್ತಿನಲ್ಲಿ 100 ಕೋಟಿ ರೂ.ಗಳನ್ನು (ಸುಮಾರು 12 ಮಿಲಿಯನ್ ಡಾಲರ್) ಸಂಗ್ರಹಿಸಿದೆ. ಪ್ರಸ್ತುತ ನಿಧಿಯನ್ನು 1,200 ರಿಂದ 1,400 ಕೋಟಿ ರೂ.ಗಳ ಮೌಲ್ಯಮಾಪನದಲ್ಲಿ ಸಂಗ್ರಹಿಸಲಾಗಿದೆ.
ತ್ವರಿತ ದಿನಸಿ ವಿತರಣಾ ಪ್ಲಾಟ್ ಫಾರ್ಮ್ ಜೆಪ್ಟೊ ಅಸ್ತಿತ್ವದಲ್ಲಿರುವ ಮತ್ತು ಹೊಸ ಹೂಡಿಕೆದಾರರಿಂದ ಸುಮಾರು 650 ಮಿಲಿಯನ್ ಡಾಲರ್ ಸಂಗ್ರಹಿಸಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಈ ಧನಸಹಾಯವು ಬ್ಲಿಂಕಿಟ್ನ ನಿಕಟ ಪ್ರತಿಸ್ಪರ್ಧಿಯಾಗಿರುವ ಜೆಪ್ಟೊದ ಮೌಲ್ಯವನ್ನು ಸುಮಾರು 3.5 ಬಿಲಿಯನ್ ಡಾಲರ್ಗೆ ಹೆಚ್ಚಿಸಲಿದೆ. ಮುಂದಿನ 2 ರಿಂದ 3 ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಲು ಯೋಜಿಸಿರುವುದಾಗಿ ಜೆಪ್ಟೊ ಇತ್ತೀಚೆಗೆ ಹೇಳಿದೆ.
ಭಾರತೀಯ ಸ್ಟಾರ್ಟ್ಅಪ್ಗಳು 2024 ರಲ್ಲಿ ಇಲ್ಲಿಯವರೆಗೆ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಆದಾಗ್ಯೂ 2023 ರ ಕೊನೆಯ ಆರು ತಿಂಗಳುಗಳಿಗೆ ಹೋಲಿಸಿದರೆ 2024 ರ ಮೊದಲಾರ್ಧವು ಉತ್ತಮವಾಗಿದೆ. 2023ರ ಕೊನೆಯ ಆರು ತಿಂಗಳುಗಳಲ್ಲಿ ಸುಮಾರು 15,000 ಮತ್ತು 2023 ರ ಮೊದಲಾರ್ಧದಲ್ಲಿ 21,000 ಜನರು ಉದ್ಯೋಗ ಕಳೆದುಕೊಂಡಿದ್ದರು.
ಇದನ್ನೂ ಓದಿ : 82,000ಕ್ಕೆ ತಲುಪಲಿದೆಯಾ ಸೆನ್ಸೆಕ್ಸ್? ರೇಟಿಂಗ್ ಏಜೆನ್ಸಿಗಳ ಮುನ್ಸೂಚನೆ ಏನು? - Stock Market