ಮುಂಬೈ: ಮುಂದಿನ 12ರಿಂದ 15 ತಿಂಗಳಲ್ಲಿ ಎಂಸಿಎಕ್ಸ್ನಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ 1,25,000 ರೂ. ಹಾಗೂ ಕಾಮೆಕ್ಸ್ನಲ್ಲಿ 40 ಡಾಲರ್ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಶನಿವಾರ ತಿಳಿಸಿದೆ. ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಎಂಒಎಫ್ಎಸ್ಎಲ್) ವರದಿಯ ಪ್ರಕಾರ, ಬೆಳ್ಳಿಯ ದರ ಇತ್ತೀಚೆಗೆ ಶೇಕಡಾ 40 ಕ್ಕಿಂತ ಅಧಿಕ (ವರ್ಷದಿಂದ ವರ್ಷಕ್ಕೆ) ಹೆಚ್ಚಳವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ 1 ಲಕ್ಷ ರೂಪಾಯಿ ತಲುಪುವ ಮೂಲಕ ಅತ್ಯುತ್ತಮ ಮಟ್ಟದ ಏರಿಕೆ ಕಂಡಿದೆ.
ಮಧ್ಯಮಾವಧಿಯಲ್ಲಿ ಚಿನ್ನದ ದರ 81,000 ರೂ. ಮತ್ತು ದೀರ್ಘಾವಧಿಯಲ್ಲಿ 86,000 ರೂ. ತಲುಪಬಹುದು ಎಂದು ಎಂಒಎಫ್ಎಸ್ಎಲ್ ಅಂದಾಜಿಸಿದೆ. ಕಾಮೆಕ್ಸ್ನಲ್ಲಿ ಚಿನ್ನವು ಮಧ್ಯಮಾವಧಿಯಲ್ಲಿ 2,830 ಡಾಲರ್ ಮತ್ತು ದೀರ್ಘಾವಧಿಯಲ್ಲಿ 3,000 ಡಾಲರ್ ತಲುಪುವ ನಿರೀಕ್ಷೆಯಿದೆ.
ಮಾರುಕಟ್ಟೆಯ ಅನಿಶ್ಚಿತತೆ, ಬಡ್ಡಿ ದರ ಕಡಿತದ ನಿರೀಕ್ಷೆ, ಹೆಚ್ಚುತ್ತಿರುವ ಬೇಡಿಕೆ ಮತ್ತು ರೂಪಾಯಿ ಅಪಮೌಲ್ಯದಿಂದ 2024 ರಲ್ಲಿ ಚಿನ್ನದ ಬೆಲೆ ಗಮನಾರ್ಹವಾಗಿ ಏರಿಕೆಯಾಗಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆಯ ನಂತರದ ತಿಂಗಳುಗಳು ಚಿನ್ನದ ದರ ಎಷ್ಟಾಗಬಹುದು ಎಂಬುದನ್ನು ರೂಪಿಸುವಲ್ಲಿ ನಿರ್ಣಾಯಕವಾಗಲಿವೆ" ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ನ ಸರಕು ಸಂಶೋಧನೆಯ ವಿಶ್ಲೇಷಕ ಮಾನವ್ ಮೋದಿ ಹೇಳಿದ್ದಾರೆ.
ಫೆಡರಲ್ ರಿಸರ್ವ್ನ ಬಡ್ಡಿದರ ಕಡಿತದ ನಿರೀಕ್ಷೆ ಮತ್ತು ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಈ ವರ್ಷದಲ್ಲಿ ಅಮೂಲ್ಯ ಲೋಹಗಳ ದರ ಹೆಚ್ಚಾಗಲು ಪ್ರಮುಖ ಎರಡು ಕಾರಣಗಳಾಗಿವೆ. ಒಟ್ಟಾರೆಯಾಗಿ, ಈ ದೀಪಾವಳಿಯ ಸೀಸನ್ನಲ್ಲಿ ಚಿನ್ನದ ಮಾರುಕಟ್ಟೆ ಸಕಾರಾತ್ಮಕವಾಗಿರಲಿದೆ ಎಂದು ಊಹಿಸಲಾಗಿದೆ. ಇದು ಬುಲಿಯನ್ ಮಾರುಕಟ್ಟೆಯಲ್ಲಿ ಆಶಾವಾದ ಹೆಚ್ಚಿಸಿದೆ ಎಂದು ಮೋದಿ ಹೇಳಿದರು.
ಬದಲಾಗುತ್ತಿರುವ ಸನ್ನಿವೇಶಗಳು ಅಥವಾ ಮಾರುಕಟ್ಟೆಯ ಚಂಚಲತೆಯನ್ನು ಲೆಕ್ಕಿಸದೆ ಚಿನ್ನವು ಒಂದು ಸ್ಥಿರವಾದ ಹೂಡಿಕೆ ಮೂಲವಾಗಿ ಉಳಿದಿದೆ. ಚಿನ್ನವು ಐತಿಹಾಸಿಕವಾಗಿ ಅನಿಶ್ಚಿತ ಸಮಯಗಳಲ್ಲಿಯೂ ಮೌಲ್ಯಯುತ ವಿಶ್ವಾಸಾರ್ಹ ಹೂಡಿಕೆಯ ಸ್ವತ್ತಾಗಿದೆ.
ವರದಿಯ ಪ್ರಕಾರ, 2019 ರ ದೀಪಾವಳಿಯ ಸಮಯದಲ್ಲಿ ಯಾರಾದರೊಬ್ಬರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ, ಈ ದೀಪಾವಳಿಯ ವೇಳೆಗೆ ಅವರು ತಮ್ಮ ದೇಶೀಯ ಚಿನ್ನದ ಹೂಡಿಕೆಯ ಮೇಲೆ ಶೇಕಡಾ 103 ರಷ್ಟು ಆದಾಯ ಪಡೆಯುತ್ತಾರೆ. 2011 ರಿಂದ, ದೀಪಾವಳಿಗೆ ಮುಂಚಿನ 30 ದಿನಗಳಲ್ಲಿ ಕೇವಲ ಎರಡು ಸಂದರ್ಭಗಳಲ್ಲಿ (2015 ಮತ್ತು 2016) ಮಾತ್ರ ಚಿನ್ನದ ದರ ಇಳಿಕೆಯನ್ನು ದಾಖಲಿಸಿತ್ತು.