ಹೈದರಾಬಾದ್: ಕಳೆದ ಎರಡು ವರ್ಷಗಳಿಂದ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬಂಗಾರದ ಬೆಲೆ ದುಪ್ಪಟ್ಟಾಗಿದೆ. 2 ವರ್ಷಗಳ ಹಿಂದೆ ಚಿನ್ನದ ಮೇಲೆ ಹೂಡಿಕೆ ಮಾಡಿದವರು ಇಂದು ದೊಡ್ಡ ಲಾಭ ಮಾಡಿಕೊಂಡಿದ್ದಾರೆ. ಜಾಗತಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಉದ್ವಿಗ್ನತೆಗಳು, ಹೆಚ್ಚುತ್ತಿರುವ ಹಣದುಬ್ಬರ ಮತ್ತು ವ್ಯಾಪಾರ ಅಡೆತಡೆಗಳು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತಿವೆ. ಈಗ ಬಡವರ ನೆಚ್ಚಿನ ಬೆಳ್ಳಿ ಬೆಲೆ ಕೂಡಾ ಭಾರಿ ಪರಿಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಕಿಲೋ ಬೆಳ್ಳಿಯ ಬೆಲೆ 1 ಲಕ್ಷ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
ಭಾರತ ಮತ್ತು ಚೀನಾ ಸೇರಿದಂತೆ ಕೆಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿವೆ. ಹೀಗಾಗಿ ಬೇಡಿಕೆ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ದರ (10 ಗ್ರಾಂ 24 ಕ್ಯಾರೆಟ್ ಚಿನ್ನ) ರೂ.62,000 ದಿಂದ ರೂ.75,000ಕ್ಕೆ ಏರಿಕೆಯಾಗಿದೆ. ಇದರ ಪ್ರಕಾರ, ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಸರಿಸುಮಾರು ಶೇ 20 ರಷ್ಟು ಆದಾಯವನ್ನು ತಂದುಕೊಟ್ಟಿದೆ. ಸದ್ಯ ಪ್ರತಿ ಕೆ.ಜಿ ಬೆಳ್ಳಿ ಬೆಲೆ 86,000 ರೂ. ದಾಟಿದೆ. ಇಲ್ಲಿಂದ ಬೆಳ್ಳಿ ಬೆಲೆಯೂ ಆಕರ್ಷಕವಾಗಿ ಏರಿಕೆಯಾಗುವ ಅವಕಾಶವಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ತನ್ನ ಇತ್ತೀಚಿನ ವರದಿಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ಶೀಘ್ರದಲ್ಲೇ 1,00,000 ರೂ. ದಾಟಬಹುದು ಎಂದು ಹೇಳಿದೆ. ಹೂಡಿಕೆದಾರರಿಗೆ ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎಂಬುದು ಸ್ಪಷ್ಟವಾಗಿದೆ. ಬೆಲೆ ಕುಸಿದಾಗಲೆಲ್ಲಾ ಬೆಳ್ಳಿಯನ್ನು ಖರೀದಿಸಬಹುದು ಎಂದು ಅದು ಸೂಚಿಸುತ್ತದೆ.
ಕಾರಣಗಳು: ಉತ್ಪಾದನೆ ಮತ್ತು ಕೈಗಾರಿಕಾ ಬೇಡಿಕೆಯು ಬೆಳ್ಳಿ ಬೆಲೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಮೆಕ್ಸಿಕೋ, ದಕ್ಷಿಣ ಅಮೆರಿಕ, ಪೆರು, ಚಿಲಿ, ಬೊಲಿವಿಯಾ ಮತ್ತು ಅರ್ಜೆಂಟೀನಾದಲ್ಲಿ ಬೆಳ್ಳಿ ಗಣಿಗಳು ಹೇರಳವಾಗಿವೆ. ಈ ದೇಶಗಳು ಪ್ರಪಂಚದಾದ್ಯಂತ ಉತ್ಪಾದಿಸುವ ಬೆಳ್ಳಿಯ ಶೇಕಡಾ 50 ಕ್ಕಿಂತ ಹೆಚ್ಚು. ಆದಾಗ್ಯೂ, ಈ ದೇಶಗಳಲ್ಲಿ ರಾಜಕೀಯ ಅಸ್ಥಿರತೆ ಸೇರಿದಂತೆ ಇತರ ಅಂಶಗಳಿಂದ ಕಳೆದ ಹತ್ತು ವರ್ಷಗಳಲ್ಲಿ ಬೆಳ್ಳಿ ಉತ್ಪಾದನೆಯು ತೀವ್ರವಾಗಿ ಕುಸಿಯುವಂತೆ ಮಾಡಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿದೆ.
20 ರಷ್ಟು ಬೆಳ್ಳಿಯನ್ನು ಮಾತ್ರ ಆಭರಣಗಳಿಗೆ ಬಳಸಲಾಗುತ್ತದೆ. 80 ರಷ್ಟು ಬೆಳ್ಳಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಕೈಗಾರಿಕಾ ಬಳಕೆ ಹೆಚ್ಚಾದರೆ ಬೆಳ್ಳಿ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಬೆಳ್ಳಿಯ ಪೂರೈಕೆ ಬಹುತೇಕ ಸ್ಥಿರವಾಗಿದೆ. ಆದರೆ, ಉದ್ಯಮದಲ್ಲಿ ಬೆಳ್ಳಿಯ ಬಳಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೈಗಾರಿಕಾ ವಲಯದಲ್ಲಿ ತಾಮ್ರ, ಅಲ್ಯೂಮಿನಿಯಂ, ನಿಕಲ್, ಬೆಳ್ಳಿ ಮತ್ತಿತರ ಲೋಹಗಳ ಬಳಕೆ ಹೆಚ್ಚುತ್ತಿದೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿಗಳು ಮತ್ತು ವಿದ್ಯುತ್ ಶೇಖರಣಾ ಸೌಲಭ್ಯಗಳಲ್ಲಿ ಈ ಲೋಹಗಳ ಬಳಕೆ ಹೆಚ್ಚುತ್ತಿದೆ. ಹಾಗಾಗಿ ಸದ್ಯದಲ್ಲಿಯೇ ಬೆಳ್ಳಿಯ ಜತೆಗೆ ತಾಮ್ರ, ನಿಕಲ್, ಅಲ್ಯೂಮಿನಿಯಂ ಲೋಹಗಳಿಗೂ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದು ತುಂಬಾ ಲಾಭದಾಯಕ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.
ನಿಮ್ಮ ಗಮನಕ್ಕೆ: ಆದಾಗ್ಯೂ, ಯಾವುದೇ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ವೈಯಕ್ತಿಕ ಹಣಕಾಸು ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. ಪೂರ್ವಾಪರ ಯೋಚಿಸಿ ಮುಂದುವರೆಯುವುದು ಉಚಿತ