ಮುಂಬೈ: ಸಕಾರಾತ್ಮಕ ಜಾಗತಿಕ ಸೂಚನೆಗಳು ಮತ್ತು ಕಚ್ಚಾ ತೈಲ ಬೆಲೆಗಳ ಇಳಿಕೆಯ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಯ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಏಪ್ರಿಲ್ 8 ರ ಸೋಮವಾರ ತಮ್ಮ ಹೊಸ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡವು.
ಸೋಮವಾರ ಸೆನ್ಸೆಕ್ಸ್ ತನ್ನ ಹಿಂದಿನ ಮುಕ್ತಾಯದ 74,248.22 ಕ್ಕೆ ಹೋಲಿಸಿದರೆ 74,555.44 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ 74,869.30 ಕ್ಕೆ ತಲುಪಿತ್ತು. 30 ಷೇರುಗಳ ಸೆನ್ಸೆಕ್ಸ್ ಅಂತಿಮವಾಗಿ 494 ಪಾಯಿಂಟ್ ಅಥವಾ ಶೇಕಡಾ 0.67 ರಷ್ಟು ಏರಿಕೆ ಕಂಡು 74,742.50 ರಲ್ಲಿ ಕೊನೆಗೊಂಡಿದೆ.
ಬಿಎಸ್ಇ-ಲಿಸ್ಟೆಡ್ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಸೋಮವಾರ ಮೊದಲ ಬಾರಿಗೆ 400 ಲಕ್ಷ ಕೋಟಿ ರೂ.ಗಳನ್ನು ದಾಟಿದೆ.
ನಿಫ್ಟಿ 50 ತನ್ನ ಹಿಂದಿನ ಮುಕ್ತಾಯದ 22,513.70 ಕ್ಕೆ ಹೋಲಿಸಿದರೆ 22,578.35 ರಲ್ಲಿ ಪ್ರಾರಂಭವಾಯಿತು ಮತ್ತು ದಿನದ ವಹಿವಾಟಿನಲ್ಲಿ 22,697.30 ರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು. ನಿಫ್ಟಿ 153 ಪಾಯಿಂಟ್ ಅಥವಾ ಶೇಕಡಾ 0.68 ರಷ್ಟು ಏರಿಕೆ ಕಂಡು 22,666.30 ರಲ್ಲಿ ಕೊನೆಗೊಂಡಿತು. ನಿಫ್ಟಿ 50 ಸೂಚ್ಯಂಕದಲ್ಲಿನ 37 ಷೇರುಗಳು ಏರಿಕೆ ಕಂಡವು.
ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ತನ್ನ ಹೊಸ ದಾಖಲೆಯ ಗರಿಷ್ಠ 41,113.16 ಕ್ಕೆ ತಲುಪಿದ ನಂತರ ಶೇಕಡಾ 0.26 ರಷ್ಟು ಏರಿಕೆಯಾಗಿ 40,937.30 ರಲ್ಲಿ ಕೊನೆಗೊಂಡಿತು. ಆದಾಗ್ಯೂ, ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಏರಿಕೆಯಾಗಲಿಲ್ಲ ಮತ್ತು ಶೇಕಡಾ 0.06 ರಷ್ಟು ಕುಸಿಯಿತು.
ಡಿಮಾರ್ಟ್, ಟಾಟಾ ಸ್ಟೀಲ್, ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ, ಎನ್ಟಿಪಿಸಿ, ಐಷರ್ ಮೋಟಾರ್ಸ್, ಗೇಲ್, ವೇದಾಂತ ಮತ್ತು ಜೊಮಾಟೊ ಸೇರಿದಂತೆ 250 ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು. ಐಷರ್ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ, ಎನ್ಟಿಪಿಸಿ ಮತ್ತು ಎಸ್ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಷೇರುಗಳು ನಿಫ್ಟಿ 50 ಸೂಚ್ಯಂಕದಲ್ಲಿ ಹೆಚ್ಚು ಲಾಭ ಗಳಿಸಿದವು.
ಏತನ್ಮಧ್ಯೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಶಮನವಾಗುವ ಸಂಕೇತಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳು ಕಡಿಮೆಯಾಗಿವೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 1 ರಷ್ಟು ಇಳಿದು ಬ್ಯಾರೆಲ್ಗೆ 90 ಡಾಲರ್ಗೆ ಹತ್ತಿರದಲ್ಲಿದೆ.
ಇದನ್ನೂ ಓದಿ : 2023-24ರಲ್ಲಿ ಭಾರತದ ಇಂಧನ ಬಳಕೆ ದಾಖಲೆಯ ಮಟ್ಟಕ್ಕೆ ಹೆಚ್ಚಳ - Fuel Demand