ನವದೆಹಲಿ: ಹಣ ಪಾವತಿಗೆ ಸರಳ ವಿಧಾನವಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಈಗ ವಿದೇಶಗಳಲ್ಲೂ ಲಭ್ಯವಿದೆ. ಸೋಮವಾರವಷ್ಟೇ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಇದನ್ನು ಜಾರಿಗೆ ತರಲಾಗಿದೆ. ಯಾವೆಲ್ಲ ದೇಶಗಳಲ್ಲಿ ಯುಪಿಐ ಸೇವೆ ಇದೆ ಎಂಬುದರ ಮಾಹಿತಿಯನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ.
-
UPI goes Global!🤩
— MyGovIndia (@mygovindia) February 12, 2024
India's Unified Payments Interface goes International with launches in Sri Lanka and Mauritius!
An instant, one-stop payment interface showcases 'Make in India, Make for the World'. #DigitalPayment #RuPay pic.twitter.com/EI8LBWxZCi
ಸರ್ಕಾರದ ಅಧಿಕೃತ MyGovIndia ಎಕ್ಸ್ ಖಾತೆಯಲ್ಲಿ ವಿಶ್ವ ಭೂಪಟದ ಮೂಲಕ ಯಾವೆಲ್ಲಾ ದೇಶಗಳಲ್ಲಿ ಯುಪಿಐ ಸೇವೆ ಇದೆ ಎಂಬುದನ್ನು ಗುರುತು ಮಾಡಿ ತೋರಿಸಿದೆ. ಈ ದೇಶಗಳಿಗೆ ಭೇಟಿ ನೀಡುವ ಭಾರತೀಯರು ಮತ್ತು ಅಲ್ಲಿನ ಪ್ರವಾಸಿಗರು ಭಾರತಕ್ಕೆ ಬಂದಾಗ ಡಿಜಿಟಲ್ ಪಾವತಿ ಸೇವೆಯಾದ ಯುಪಿಐ ಮೂಲಕ ಸರಳವಾಗಿ ಹಣ ವರ್ಗಾವಣೆ ಮಾಡಬಹುದು.
ಯಾವೆಲ್ಲಾ ದೇಶಗಳಲ್ಲಿದೆ ಯುಪಿಐ: ಫ್ರಾನ್ಸ್, ಯುಎಇ, ಮಾರಿಷಸ್, ಶ್ರೀಲಂಕಾ, ಸಿಂಗಾಪುರ್, ಭೂತಾನ್ ಮತ್ತು ನೇಪಾಳಗಳು ಯುಪಿಐ ಪಾವತಿಗಳನ್ನು ಸ್ವೀಕರಿಸುವ ದೇಶಗಳಾಗಿವೆ ಎಂದು ಸರ್ಕಾರ ಹೇಳಿದೆ. ಸೋಮವಾರವಷ್ಟೇ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಡಿಜಿಟಲ್ ಪಾವತಿಗೆ ಚಾಲನೆ ನೀಡಲಾಗಿದೆ.
ಯುಪಿಐ ಗೋಸ್ ಗ್ಲೋಬಲ್. ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ ಅನ್ನು ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಚಾಲನೆ ನೀಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ತ್ವರಿತ, ಏಕಮುಖ ಪಾವತಿ ಸೇವೆಯು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಅನ್ನು ಪ್ರತಿಬಿಂಬಿಸುತ್ತದೆ ಎಂದು ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ.
ಜಾಗತಿಕವಾಗಿ ಯುಪಿಐ ಸೇವೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ವರ್ಷ ದೇಶದಲ್ಲಿ ಜಿ20 ಶೃಂಗಸಭೆಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅತಿಥಿಗಳಿಗೆ ಪರಿಚಯಿಸಿತು. ಮೊಬೈಲ್ಗಳ ಮೂಲಕ ಸಲೀಸಲಾಗಿ ವಹಿವಾಟು ನಡೆಸುವ ಬಗ್ಗೆ ಮಾಹಿತಿ ನೀಡಲಾಯಿತು. ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ UPI ಸೇವೆಯನ್ನು ಆರಂಭಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ರಾಷ್ಟ್ರಗಳ ನಡುವಿನ ಐತಿಹಾಸಿಕ ಸಂಬಂಧಗಳು ಬೆಸೆಯುತ್ತವೆ. ಫಿನ್‌ಟೆಕ್ ಸೇವೆಗಳು ಎರಡು ರಾಷ್ಟ್ರಗಳಿಗೆ ಸಹಾಯ ಮಾಡುತ್ತವೆ ಎಂದರು.
ಇದಕ್ಕೂ ಮೊದಲು, ಫೆಬ್ರವರಿ 2 ರಂದು ಫ್ರಾನ್ಸ್ನಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. BHIM ಅಪ್ಲಿಕೇಶನ್ ಮೂಲಕ UPI ವಹಿವಾಟುಗಳನ್ನು ಆರಂಬಿಸಿದ ಮೊದಲ ದೇಶ ಭೂತಾನ್ ಆಗಿದೆ. 2021 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೂತಾನ್ನ ಲಿಯಾನ್ಪೊ ನಾಮ್ಗೇ ತ್ಶೆರಿಂಗ್ ಅವರ ಜೊತೆಗೂಡಿ ಸೇವೆಗೆ ಚಾಲನೆ ನೀಡಿದ್ದರು. ಕಳೆದ ವರ್ಷ ಜಪಾನ್ನಲ್ಲಿ ಯುಪಿಐ ಪಾವತಿ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಶ್ರೀಲಂಕಾ, ಮಾರಿಷಸ್ಗಳಲ್ಲಿ UPI ಪಾವತಿ ವ್ಯವಸ್ಥೆ ಆರಂಭ: ಅನುಕೂಲವೇನು ಗೊತ್ತಾ?