ನವದೆಹಲಿ : ಓಲಾ ಕ್ಯಾಬ್ಸ್ ಸಿಇಒ ಹೇಮಂತ್ ಬಕ್ಷಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ. ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಕಂಪನಿಯು ಈ ಬಗ್ಗೆ ಮಾಹಿತಿ ನೀಡಿದೆ. ಓಲಾ ಕ್ಯಾಬ್ಸ್ನ ಸಿಇಒ ಆಗಿ ನೇಮಕಗೊಂಡ ನಾಲ್ಕೇ ತಿಂಗಳಲ್ಲಿ ಬಕ್ಷಿ ರಾಜೀನಾಮೆ ನೀಡಿದ್ದಾರೆ.
ಲಾಭದಾಯಕತೆಯನ್ನು ಸುಧಾರಿಸುವ ಮತ್ತು ಮುಂದಿನ ಹಂತದ ಬೆಳವಣಿಗೆಗೆ ಕಂಪನಿಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಪುನರ್ರಚನೆ ಪ್ರಕ್ರಿಯೆಯ ಬಗ್ಗೆಯೂ ಭವಿಶ್ ಅಗರ್ವಾಲ್ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ, ಪುನರ್ ರಚನೆ ಪ್ರಕ್ರಿಯೆಯ ಭಾಗವಾಗಿ ಕನಿಷ್ಠ ಶೇಕಡಾ 10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.
"ಕಂಪನಿಯು ಎಐ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಗಣನೀಯ ಹೂಡಿಕೆ ಮಾಡಿದೆ. ಇದರಿಂದ ಕಂಪನಿಗೆ ಸಾಕಷ್ಟು ಉಳಿತಾಯವಾಗಿದೆ ಮತ್ತು ನಮ್ಮ ವಿವಿಧ ವ್ಯವಹಾರಗಳಲ್ಲಿ ಅತ್ಯಾಧುನಿಕ ಉತ್ಪನ್ನ ಮತ್ತು ಸೇವೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ಷೇತ್ರಗಳ ಮೇಲೆ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ. ಈ ಬದಲಾವಣೆಗಳಿಂದ ಕಂಪನಿಯಲ್ಲಿನ ಕೆಲ ಹುದ್ದೆಗಳು ಅನಗತ್ಯವಾಗಬಹುದು" ಎಂದು ಅಗರ್ವಾಲ್ ಬರೆದಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಐಪಿಒ ಹೊರತರಲು ಓಲಾ ಕ್ಯಾಬ್ಸ್ ಹೂಡಿಕೆ ಬ್ಯಾಂಕುಗಳೊಂದಿಗೆ ಪ್ರಾಥಮಿಕ ಚರ್ಚೆಗಳನ್ನು ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಈ ಬೆಳವಣಿಗೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಓಲಾ ಕ್ಯಾಬ್ಸ್ ತನ್ನ ಸಿಎಫ್ಒ (ಎಕ್ಸ್ ಪಿ &ಜಿ) ಆಗಿ ಕಾರ್ತಿಕ್ ಗುಪ್ತಾ ಮತ್ತು ಸಿಬಿಒ (ಮಾಜಿ ಹಾಟ್ಸ್ಟಾರ್) ಆಗಿ ಸಿದ್ಧಾರ್ಥ್ ಶಕ್ಧೇರ್ ಸೇರಿದಂತೆ ಅನೇಕ ಹೊಸ ನೇಮಕಾತಿಗಳನ್ನು ಮಾಡಿದೆ.
ಇತ್ತೀಚೆಗೆ ಓಲಾ ಕ್ಯಾಬ್ಸ್ ಯುನೈಟೆಡ್ ಕಿಂಗ್ ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ತನ್ನ ಎಲ್ಲಾ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ವ್ಯವಹಾರ ಸ್ಥಗಿತಗೊಳಿಸಲು ನಿರ್ಧರಿಸಿದೆ. ಭಾರತೀಯ ಮಾರುಕಟ್ಟೆಯತ್ತ ಗಮನ ಹರಿಸಲು ಮತ್ತು ತನ್ನ ಎಲೆಕ್ಟ್ರಿಕ್ ವಾಹನ (ಇವಿ)ಗಳ ಫ್ಲೀಟ್ ಅನ್ನು ಹೆಚ್ಚಿಸಲು ಕಂಪನಿ ನಿರ್ಧರಿಸಿದೆ. ಓಲಾ ಕ್ಯಾಬ್ಸ್ 2018 ರಿಂದ ಈ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಓಲಾ ಮೊಬಿಲಿಟಿ ವ್ಯವಹಾರವು 2023 ರ ಹಣಕಾಸು ವರ್ಷದಲ್ಲಿ 2,135 ಕೋಟಿ ರೂ. ಆದಾಯ ದಾಖಲಿಸಿದೆ. ಇದು ಸುಮಾರು 58 ಪ್ರತಿಶತದಷ್ಟು ಹೆಚ್ಚಾಗಿದೆ. 2022ರ ಹಣಕಾಸು ವರ್ಷದಲ್ಲಿ 66 ಕೋಟಿ ರೂ.ಗಳ ಇಬಿಐಟಿಡಿಎ ನಷ್ಟವನ್ನು ವರದಿ ಮಾಡಿದ ನಂತರ ಸಂಸ್ಥೆಯು ಮೊದಲ ಬಾರಿಗೆ 250 ಕೋಟಿ ರೂ.ಗಳ ಸಕಾರಾತ್ಮಕ ಇಬಿಐಟಿಡಿಎ ವರದಿ ಮಾಡಿದೆ.
ಇದನ್ನೂ ಓದಿ : ಜೂನ್ ಅಂತ್ಯಕ್ಕೆ 20 ಪ್ರಮುಖ ಖನಿಜ ಗಣಿಗಳ ಹರಾಜು: ಗಣಿ ಇಲಾಖೆ ಕಾರ್ಯದರ್ಶಿ - Mineral Blocks Auction