ನವದೆಹಲಿ: 2023-24ರ ಅವಧಿಯಲ್ಲಿ ಭಾರತೀಯ ಆರ್ಥಿಕತೆಯಲ್ಲಿ 46.6 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2022-23ರಲ್ಲಿ 596.7 ಮಿಲಿಯನ್ ಇದ್ದ ಉದ್ಯೋಗಿಗಳ ಸಂಖ್ಯೆ 2024ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 643.3 ಮಿಲಿಯನ್ಗೆ ಏರಿಕೆಯಾಗಿದೆ.
2017-18 ಮತ್ತು 2021-22ರ ನಡುವೆ ಸರಾಸರಿ 20 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಿದ್ದು, 2023-24ರಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಆರ್ಬಿಐನ ಕೆಎಲ್ಇಎಂಎಸ್ (KLEMS) ಡೇಟಾಬೇಸ್ ಉತ್ಪಾದನೆಯ ಐದು ಪ್ರಮುಖ ಒಳಹರಿವುಗಳನ್ನು ಒಳಗೊಂಡಿದೆ. ಅವು- ಬಂಡವಾಳ (ಕೆ), ಕಾರ್ಮಿಕ (ಎಲ್), ಶಕ್ತಿ (ಇ), ವಸ್ತುಗಳು (ಎಂ) ಮತ್ತು ಸೇವೆಗಳು (ಎಸ್). ಇಡೀ ಆರ್ಥಿಕತೆಯನ್ನು ಒಳಗೊಳ್ಳುವ ಆರು ವಲಯಗಳನ್ನು ರೂಪಿಸಲು ಒಟ್ಟು 27 ಕೈಗಾರಿಕೆಗಳಿಗಾಗಿ ಈ ಡೇಟಾಬೇಸ್ ಅನ್ನು ರಚಿಸಲಾಗಿದೆ.
ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಆರ್ಬಿಐ ಇದೇ ಮೊದಲ ಬಾರಿಗೆ ಹಣಕಾಸು ವರ್ಷ 2024 ರಲ್ಲಿ ಒಟ್ಟು ಆರ್ಥಿಕತೆಯ ಉತ್ಪಾದಕತೆಯ ತಾತ್ಕಾಲಿಕ ಅಂದಾಜನ್ನು ಲೆಕ್ಕಾಚಾರ ಮಾಡಿದೆ.
ಇದು ಕಾರ್ಮಿಕರ ಶಿಕ್ಷಣ ಮಟ್ಟವನ್ನು ಆಧರಿಸಿ ಆರ್ಥಿಕತೆಯಲ್ಲಿ ಕಾರ್ಮಿಕರ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಎಲ್ಲಾ ರೀತಿಯ ಶಿಕ್ಷಣ ಪಡೆದವರು ಮತ್ತು ಎಲ್ಲ ವಯೋಮಾನಗಳ ಅಡಿಯಲ್ಲಿ ಉದ್ಯೋಗದ ಪ್ರಮಾಣ ಹೆಚ್ಚಾಗಿರುವುದನ್ನು ಅಂಕಿ ಅಂಶಗಳು ತೋರಿಸಿವೆ. ಇನ್ನು 2018ರಲ್ಲಿ ಶೇ 2.2ರಷ್ಟಿದ್ದ ನಿರುದ್ಯೋಗ ಪ್ರಮಾಣ 2024ರಲ್ಲಿ ಶೇ 1.4ಕ್ಕೆ ಇಳಿದಿದೆ.
ನಿರ್ಮಾಣವನ್ನು ಹೊರತುಪಡಿಸಿ, ಸೇವಾ ವಲಯವು ಈಗ ಕೃಷಿ ವಲಯದಿಂದ ಹೊರಹೋಗುತ್ತಿರುವ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ. ಇದು 2000-2011 ರ ಅವಧಿಗೆ ವ್ಯತಿರಿಕ್ತವಾಗಿದೆ. ಆಗ ನಿರ್ಮಾಣ ಕ್ಷೇತ್ರವು ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುತ್ತಿತ್ತು. ಹಣಕಾಸು ಮತ್ತು ವ್ಯವಹಾರ ಸೇವೆಗಳು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಉನ್ನತ ಕೌಶಲ್ಯದ ವಲಯದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಡೇಟಾ ತೋರಿಸಿದೆ.
ಏತನ್ಮಧ್ಯೆ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರತ್ಯೇಕ ಹೇಳಿಕೆಯಲ್ಲಿ, 2017-18 ರಿಂದ 2021-22 ರ ಆರ್ಥಿಕ ವರ್ಷದಿಂದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 8 ಕೋಟಿಗೂ ಹೆಚ್ಚು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದೆ. ಅಂದರೆ ವರ್ಷಕ್ಕೆ 2 ಕೋಟಿಗೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಜುಲೈನಲ್ಲಿ ಭರವಸೆ ಮೂಡಿಸಿದ ಮುಂಗಾರು: ದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು ಬಿತ್ತನೆ - July Monsoon