ನವದೆಹಲಿ: ಮಾರ್ಚ್ 31, 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತದ ಪೆಟ್ರೋಲಿಯಂ ಉತ್ಪನ್ನಗಳಾದ ಡೀಸೆಲ್, ಪೆಟ್ರೋಲ್, ಎಲ್ಪಿಜಿ ಮತ್ತು ಬಿಟುಮೆನ್ ಬಳಕೆಯು ಶೇಕಡಾ 5 ರಷ್ಟು ಏರಿಕೆಯಾಗಿ 233.276 ಮಿಲಿಯನ್ ಟನ್ಗಳ ದಾಖಲೆಯ ಮಟ್ಟವನ್ನು ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ. 2022-2023ರಲ್ಲಿ ಪೆಟ್ರೋಲಿಯಂ ಸರಕುಗಳ ಒಟ್ಟಾರೆ ಬಳಕೆ 223.021 ಮಿಲಿಯನ್ ಟನ್ ಆಗಿತ್ತು.
ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಮುಖ್ಯವಾಗಿ ಟ್ರಕ್ಗಳು, ಬಸ್ಸು ಮತ್ತು ಕೃಷಿ ವಲಯದಲ್ಲಿ ಬಳಸಲಾಗುವ ಡೀಸೆಲ್ ಮಾರಾಟ ಶೇಕಡಾ 4.4 ರಷ್ಟು ಹೆಚ್ಚಾಗಿದೆ. ಇದು ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿರುವುದನ್ನು ಪ್ರತಿಬಿಂಬಿಸುತ್ತದೆ. ಈ ವರ್ಷದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟವು ಹೆಚ್ಚಾಗಿರುವ ಮಧ್ಯೆ ಪೆಟ್ರೋಲ್ ಬೇಡಿಕೆ ಶೇಕಡಾ 6.4 ರಷ್ಟು ಏರಿಕೆಯಾಗಿದೆ.
ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರವು ಬೃಹತ್ ಪ್ರಮಾಣದ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದ್ದರಿಂದ ರಸ್ತೆಗಳನ್ನು ನಿರ್ಮಿಸಲು ಬಳಸಲಾಗುವ ಬಿಟುಮೆನ್ ಮಾರಾಟವು ಆರ್ಥಿಕ ವರ್ಷದಲ್ಲಿ ಶೇಕಡಾ 9.9 ರಷ್ಟು ಹೆಚ್ಚಾಗಿದೆ. ರಸಗೊಬ್ಬರಗಳನ್ನು ತಯಾರಿಸಲು ಬಳಸುವ ನಾಫ್ತಾ ಮಾರಾಟ ಕೂಡ ವರ್ಷದಲ್ಲಿ ಹೆಚ್ಚಾಗಿದೆ.
ಅಡುಗೆ ಅನಿಲ ಅಥವಾ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮಾರಾಟ ಶೇಕಡಾ 8.6 ರಷ್ಟು ಏರಿಕೆಯಾಗಿ 2.61 ಮಿಲಿಯನ್ ಟನ್ಗಳಿಗೆ ತಲುಪಿದೆ. ನಾಫ್ತಾ ಮಾರಾಟವು ಕಳೆದ ಮಾರ್ಚ್ಗೆ ಹೋಲಿಸಿದರೆ ಶೇಕಡಾ 5.5 ರಷ್ಟು ಏರಿಕೆಯಾಗಿ ಸುಮಾರು 1.19 ಮಿಲಿಯನ್ ಟನ್ಗಳಿಗೆ ತಲುಪಿದೆ.
ಬಿಎಂಡಬ್ಲ್ಯು ಕಾರು ಮಾರಾಟ ಹೆಚ್ಚಳ: ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ 2024 ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ 3,680 ಕಾರು ಮತ್ತು 1,810 ಮೋಟಾರ್ ಸೈಕಲ್ಗಳನ್ನು ಮಾರಾಟ ಮಾಡಿದೆ. ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಪ್ರಕಾರ, 3,510 ಯುನಿಟ್ ಬಿಎಂಡಬ್ಲ್ಯು, 170 ಮಿನಿ ಮತ್ತು 1,810 ಮೋಟಾರ್ ಸೈಕಲ್ಗಳನ್ನು (ಬಿಎಂಡಬ್ಲ್ಯು ಮೋಟೊರಾಡ್) ಮಾರಾಟ ಮಾಡಿದೆ.
ಈ ಬಗ್ಗೆ ಮಾತನಾಡಿದ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪಾವಾ, "ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ದಾಖಲಿಸಿದೆ. ಹಿಂದಿನ ದಾಖಲೆಗಳನ್ನು ಮುರಿದು ಮೊದಲ ತ್ರೈಮಾಸಿಕದಲ್ಲಿ ಕಾರು ಮಾರಾಟದಲ್ಲಿ ಶೇಕಡಾ 51 ರಷ್ಟು ಬೆಳವಣಿಗೆ ಸಾಧಿಸಿದೆ." ಎಂದು ಹೇಳಿದರು.
ಇದನ್ನೂ ಓದಿ : ದೇಶಾದ್ಯಂತ ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಕೈಜೋಡಿಸಿದ ಅದಾನಿ ಮತ್ತು ಎಂಜಿ ಮೋಟಾರ್ - EV charging