ನವದೆಹಲಿ: ವಿನೂತನ ಆವಿಷ್ಕಾರ, ಯೋಚನೆಗಳನ್ನು ಬೆಳೆಸುವ ಮೂಲಕ ಉದ್ಯೋಗಿ ಸೃಷ್ಟಿಗೆ ಸಹಾಯಕವಾಗಿರುವ ಸ್ಟಾರ್ಟ್ಅಪ್ಗಳು ದೇಶದಲ್ಲಿ 1.4 ಲಕ್ಷಕ್ಕೂ ಹೆಚ್ಚಿವೆ. ಇವೆಲ್ಲವೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ)ಯಲ್ಲಿ ನೋಂದಾಯಿತ ಸಂಸ್ಥೆಗಳಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಶನಿವಾರ ತಿಳಿಸಿದ್ದಾರೆ.
ಅತಿ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳನ್ನು ಹೊಂದಿರುವ ಪಟ್ಟಿಯಲ್ಲಿ ಮಹಾರಾಷ್ಟ್ರ (25,044)ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (15,019) ಎರಡನೇ ಸ್ಥಾನದಲ್ಲಿದೆ. 14,734 ಸ್ಟಾರ್ಟ್‌ಅಪ್‌ಗಳನ್ನು ಹೊಂದುವ ಮೂಲಕ ದೆಹಲಿ ಮೂರನೇ, ಉತ್ತರ ಪ್ರದೇಶ ನಾಲ್ಕನೇ (13,299 ಸ್ಟಾರ್ಟಪ್‌ಗಳು), ಮತ್ತು ಗುಜರಾತ್ ಐದನೇ (11,436) ಸ್ಟಾರ್ಟ್‌ಅಪ್ ಹಬ್ಗಳಾಗಿವೆ ಎಂದು ಕೇಂದ್ರ ಸಚಿವರು ರಾಜ್ಯಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.
ಸ್ವದೇಶಿ ಬಂಡವಾಳ ಪಡೆಯಲು: ಸರ್ಕಾರವು ಆರಂಭಿಕ ಹಂತ, ಮಧ್ಯಮ ಹಂತ ಮತ್ತು ಬೆಳವಣಿಗೆಯ ಹಂತದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಬಂಡವಾಳವನ್ನು ಒದಗಿಸುತ್ತದೆ. ಸ್ಥಳೀಯವಾಗಿ ಅನುದಾನದ ನೆರವು ನೀಡುವ ಮೂಲಕ ವಿದೇಶಿ ಬಂಡವಾಳದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಮೇಕ್ ಇನ್ ಇಂಡಿಯಾ ಬೆಂಬಲದೊಂದಿಗೆ ಸ್ಟಾರ್ಟ್ಅಪ್ಗಳು ಬೆಳೆಯಬೇಕು ಎಂದು ಎಂದು ಹೇಳಿದರು.
ಕೇಂದ್ರ ಸರ್ಕಾರ 2016ರ ಜ.16ರಂದು ಆರಂಭಿಸಿರುವ ‘ಸ್ಟಾರ್ಟಪ್ ಇಂಡಿಯಾ’ ಕಾರ್ಯಕ್ರಮ ಹಲವು ಉದಯೋನ್ಮುಖ ಕಂಪನಿಗಳಿಗೆ ವರದಾನವಾಗಿದೆ. ನಾವೀನ್ಯತೆ ಮತ್ತು ಹೂಡಿಕೆಗಳನ್ನು ಕ್ರೋಢೀಕರಿಸುವ ವಿಷಯದಲ್ಲಿ ಇದು ಸ್ಟಾರ್ಟ್‌ಅಪ್‌ಗಳ ಪರವಾಗಿ ನಿಂತಿದೆ. ಕೇಂದ್ರ ಸರ್ಕಾರ 19 ಅಂಶಗಳ ಕ್ರಿಯಾ ಯೋಜನೆ ಜಾರಿಗೊಳಿಸುವ ಮೂಲಕ ಸ್ಟಾರ್ಟ್ ಅಪ್ಗಳ ಅಭಿವೃದ್ಧಿಗೆ ನೆರವಾಗುತ್ತಿದೆ. ಈ ಕ್ರಮದಲ್ಲಿ ಸ್ಟಾರ್ಟಪ್‌ಗಳಿಗೆ ಸಬ್ಸಿಡಿ ನೀಡುವುದು, ಪ್ರೋತ್ಸಾಹಧನ ವಿತರಿಸುವುದು, ಹೂಡಿಕೆಗಳನ್ನು ಕ್ರೋಢೀಕರಿಸುವುದು ಎಂದು ವಿವರಿಸಿದರು.
ಸ್ಟಾರ್ಟ್‌ಅಪ್ ಎಂದರೇನು?: ಭಾರತದಲ್ಲಿಯೇ ಕೇಂದ್ರ ಸ್ಥಾನ ಹೊಂದಿದ್ದು, ಸ್ಥಾಪನೆಗೊಂಡು 10 ವರ್ಷ ಪೂರ್ಣ ಮಾಡದ ಹಾಗೂ ವಾರ್ಷಿಕವಾಗಿ 100 ಕೋಟಿ ರೂಪಾಯಿಗಿಂತ ಕಡಿಮೆ ವಹಿವಾಟು ನಡೆಸುವ ಕಂಪನಿಗಳನ್ನು ಸ್ಟಾರ್ಟ್‌ಅಪ್ ಎಂದು ಪರಿಗಣಿಸಲಾಗುತ್ತದೆ. ಹೊಸ ಉತ್ಪನ್ನ, ಸೇವೆ ಅನ್ವೇಷಣೆ, ಅಭಿವೃದ್ಧಿ ಅಥವಾ ಪ್ರಗತಿಯ ನಿಟ್ಟಿನಲ್ಲಿ ಶ್ರಮಿಸುವ ಸಂಸ್ಥೆಗಳಿಗೆ ಸರ್ಕಾರವೇ ಅನುದಾನ ನೀಡುತ್ತದೆ. ಇವುಗಳು ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ, ಆದಾಯ ಸೃಷ್ಟಿ ಮಾಡುವ ಸಂಸ್ಥೆಗಳಾಗಿವೆ.
ಈಗಾಗಲೇ ಇರುವ ಕಂಪನಿ ಅಥವಾ ಸಂಸ್ಥೆಯನ್ನು ವಿಭಜಿಸಿ ಹೊಸ ಸಂಸ್ಥೆ ಹುಟ್ಟು ಹಾಕಿದ್ದರೆ ಅಥವಾ ಇರುವ ಸಂಸ್ಥೆಗೆ ಹೊಸ ರೂಪ ನೀಡಿದ್ದರೆ ಅಂಥವನ್ನು ಸರ್ಕಾರ ಸ್ಟಾರ್ಟ್ ಅಪ್ ಎಂದು ಪರಿಗಣಿಸುವುದಿಲ್ಲ. ಮುದ್ರಾ ಬ್ಯಾಂಕ್ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಸ್ಟಾರ್ಟ್‌ಅಪ್ ಆರಂಭಿಸಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ 3600ಕ್ಕೇರಿದ ಡೀಪ್ಟೆಕ್ ಸ್ಟಾರ್ಟ್‌ಅಪ್‌ಗಳ ಸಂಖ್ಯೆ: ವಿಶ್ವದಲ್ಲಿ 6ನೇ ಸ್ಥಾನ - Deeptech Startups