ಅನೇಕ ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಗಾಬರಿ ಪಡುತ್ತಾರೆ. ಐಟಿ ರಿಟರ್ನ್ಸ್‌ಗಳನ್ನು ಇ - ಫೈಲಿಂಗ್ ಪೋರ್ಟಲ್‌ನಲ್ಲಿ ಮೊದಲ ದಿನದಿಂದ ಸಲ್ಲಿಸಲು ಶುರು ಮಾಡುತ್ತಾರೆ. ನಿಗದಿತ ಸಮಯದೊಳಗೆ ಐಟಿ ರಿಟರ್ನ್ಸ್ ಸಲ್ಲಿಸುವುದು ಒಳ್ಳೆಯದಾದರೂ, ಹೆಚ್ಚು ಆತುರದಿಂದ ರಿಟರ್ನ್ಸ್ ಫೈಲ್ ಮಾಡದಂತೆ ಮತ್ತು ಜೂನ್ 15ರವರೆಗೆ ಕಾದು ಐಟಿ ರಿಟರ್ನ್ಸ್ ಸಲ್ಲಿಸಲು ತಜ್ಞರು ಸಲಹೆ ನೀಡುತ್ತಾರೆ. ತಜ್ಞರು ಯಾಕೆ ಹೀಗೆ ಹೇಳುತ್ತಾರೆ ಗೊತ್ತಾ?.
ಹಿಂದಿನ ಹಣಕಾಸು ವರ್ಷದ (2023-24) ರಿಟರ್ನ್ಸ್ ಫೈಲಿಂಗ್ ಏಪ್ರಿಲ್ 1ರಂದು ಪ್ರಾರಂಭವಾಯಿತು. ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಐಟಿಆರ್ 1, ಐಟಿಆರ್ 2, ಐಟಿಆರ್ 3, ಐಟಿಆರ್ 4, ಐಟಿಆರ್ 5, ಐಟಿಆರ್ 6 ಫಾರ್ಮ್ ಗಳನ್ನು ಇ - ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಆದರೆ, ಉದ್ಯೋಗಿಗಳು ಜೂನ್ 15ರ ಮೊದಲು ಐಟಿಆರ್ ಸಲ್ಲಿಸಬಾರದು ಎಂದು ತಜ್ಞರು ಸೂಚಿಸುತ್ತಾರೆ.
ಏಕೆಂದರೆ ಐಟಿಆರ್ ಸಲ್ಲಿಸುವಾಗ ಎಲ್ಲ ತೆರಿಗೆಯ ಆದಾಯ, ಕಡಿತಗಳು ಮತ್ತು ವಿನಾಯಿತಿಗಳನ್ನು ಘೋಷಿಸಬೇಕು. ಅಂದರೆ, ಐಟಿಆರ್ ಸಲ್ಲಿಸುವ ಸಮಯದಲ್ಲಿ ನೀವು ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ನಿಮ್ಮ ಎಲ್ಲ ಹಣಕಾಸು ವಹಿವಾಟುಗಳ ವಿವರಗಳನ್ನು ನೀಡಬೇಕು. ಆದರೆ, ಹಿಂದಿನ ಹಣಕಾಸು ವರ್ಷದ ಎಲ್ಲ ವಿವರಗಳು ಮತ್ತು ದಾಖಲೆಗಳು ಏಪ್ರಿಲ್ ವೇಳೆಗೆ ಲಭ್ಯವಾಗದಿರಬಹುದು.
ಫಾರ್ಮ್-16: ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವ ಉದ್ಯೋಗಿಗಳು ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಮೂನೆ 16 ಪ್ರಮುಖ ದಾಖಲೆಯಾಗಿದೆ. ಉದ್ಯೋಗಿ ಅದನ್ನು ತಾನು ಕೆಲಸ ಮಾಡುತ್ತಿರುವ ಕಂಪನಿಯಿಂದ ಪಡೆಯಬೇಕು. ಫಾರ್ಮ್ 16 ಮೂಲಭೂತವಾಗಿ ಟಿಡಿಎಸ್ ಪ್ರಮಾಣಪತ್ರವಾಗಿದೆ. ಸಾಮಾನ್ಯವಾಗಿ ಉದ್ಯೋಗದಾತರು ನೌಕರನ ಸಂಬಳದಿಂದ ಟಿಡಿಎಸ್ ಕಡಿತಗೊಳಿಸಿದಾಗ ಫಾರ್ಮ್ 16 ಅನ್ನು ನೀಡುತ್ತಾರೆ.
ಕಂಪನಿಯ ಮಾಲೀಕರು ತಮ್ಮ ಉದ್ಯೋಗಿಗಳು ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯ, ವಿನಾಯಿತಿಗಳು ಮತ್ತು ಟಿಡಿಎಸ್ ವಿವರಗಳೊಂದಿಗೆ ಫಾರ್ಮ್ 16 ಅನ್ನು ನೀಡುತ್ತಾರೆ. ಆದಾಗ್ಯೂ, ಹೆಚ್ಚಿನ ಕಂಪನಿಗಳು ಪ್ರತಿ ವರ್ಷ ಜೂನ್ 15ರ ನಂತರ ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16 ಅನ್ನು ನೀಡುತ್ತವೆ. ಕೆಲವು ಇತರ ಸಂಸ್ಥೆಗಳು ನಂತರ ಫಾರ್ಮ್ 16ಅನ್ನು ನೀಡುತ್ತವೆ.
ಐಟಿಆರ್ ಸಲ್ಲಿಸುವಾಗ ಫಾರ್ಮ್ 16ರ ಹೊರತಾಗಿ ಇತರ ದಾಖಲೆಗಳನ್ನು ಸಹ ಸಿದ್ಧಪಡಿಸಬೇಕಾಗುತ್ತದೆ. ವಿಶೇಷವಾಗಿ ಮಾಸಿಕ ವೇತನ ರಶೀದಿಗಳು, ಎಲ್ಲ ಭತ್ಯೆಗಳು, ನಮೂನೆ 26 ಎಎಸ್, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಬೇಕು. ನೀವು ಬ್ಯಾಂಕ್ ಠೇವಣಿಗಳ ಮೇಲೆ ಬಡ್ಡಿಯನ್ನು ಪಡೆಯುತ್ತಿದ್ದರೆ, ನೀವು ಉಳಿತಾಯ ಖಾತೆಯ ಮೇಲಿನ ಬಡ್ಡಿ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಮತ್ತು ಟಿಡಿಎಸ್ ಪ್ರಮಾಣಪತ್ರಗಳ ಬಗ್ಗೆ ಬ್ಯಾಂಕ್ ಹೇಳಿಕೆಯನ್ನು ಬ್ಯಾಂಕ್ನಿಂದ ಪಡೆಯಬೇಕು.
ಬ್ಯಾಂಕ್ಗಳು ಕೆಲವೊಮ್ಮೆ ಏಪ್ರಿಲ್ ಅಥವಾ ಮೇ ಅಂತ್ಯದ ವೇಳೆಗೆ ಈ ದಾಖಲೆಗಳನ್ನು ನೀಡುತ್ತವೆ. ಆದ್ದರಿಂದ ಯಾರಾದರೂ ಏಪ್ರಿಲ್‌ನಲ್ಲಿ ಐಟಿಆರ್ ಅನ್ನು ಸಲ್ಲಿಸಿದರೆ, ಅವರು ತಮ್ಮ ರಿಟರ್ನ್ ಫೈಲಿಂಗ್‌ನಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ನ ಒಂಬತ್ತು ತಿಂಗಳ ವಿವರಗಳನ್ನು ಮಾತ್ರ ಒದಗಿಸುವ ಸಾಧ್ಯತೆಯಿದೆ. ಹಾಗಾಗಿ ಜೂನ್ 15ರವರೆಗೆ ಕಾಯುವುದು ಉತ್ತಮ. ಆಗ ಮಾತ್ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 18 ಟಿಟಿಎ ಅಡಿ ಬ್ಯಾಂಕ್ ಠೇವಣಿಗಳ ಮೇಲೆ ಗಳಿಸಿದ ಬಡ್ಡಿ ಆದಾಯಕ್ಕೂ ತೆರಿಗೆ ವಿನಾಯಿತಿ ಪಡೆಯಬಹುದು.
ನಮೂನೆ-26ಎಎಸ್ ಎಂದರೇನು?: ಫಾರ್ಮ್-26 ಎಎಸ್ ಮೂಲಭೂತವಾಗಿ ಟಿಡಿಎಸ್ ಮತ್ತು ಟಿಸಿಎಸ್ ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ತೆರಿಗೆ ಕ್ರೆಡಿಟ್ ಅನ್ನು ಸುಲಭವಾಗಿ ಕ್ಲೈಮ್ ಮಾಡಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಈ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿದ ನಂತರವೇ ಐಟಿಆರ್ ಸಲ್ಲಿಸಬೇಕು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೆ? ಹಾಗಾದ್ರೆ ಸರಿಯಾದ ITR ಫಾರ್ಮ್ ಆಯ್ಕೆಮಾಡುವುದು ಹೇಗೆ ಗೊತ್ತಾ?