ಪ್ರಸ್ತುತ ದಿನಗಳಲ್ಲಿ ವಿಮೆ ಎಂಬುದು ಬಹುಮುಖ್ಯವಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ, ಅನಾರೋಗ್ಯ ಸಮಸ್ಯೆ, ಆಸ್ತಿ ಪಾಸ್ತಿಗಳ ಹಾನಿ, ಸೇರಿದಂತೆ ಮುಂತಾದ ಆಪತ್ತಿನ ಸಂದರ್ಭಗಳಲ್ಲಿ ಹಣಕಾಸಿನ ನೆರವು ನೀಡಿ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸುವ ಕೆಲಸವನ್ನು ವಿಮೆ ಮಾಡುತ್ತದೆ. ಹಾಗಾಗಿ ಅನೇಕ ಜನರು ಉತ್ತಮ ಭವಿಷ್ಯಕ್ಕಾಗಿ ವಿಮೆ ತೆಗೆದುಕೊಳ್ಳುತ್ತಾರೆ.
ಆದರೆ ವಿಮೆ ತೆಗೆದುಕೊಳ್ಳುವಾಗ ನಮ್ಮಲ್ಲಿ ಹಲವು ಗೊಂದಲುಗಳು ಉಂಟಾಗುತ್ತವೆ. ಯಾವ ವಿಮೆ ಖರೀದಿಸಬೇಕು, ಎಷ್ಟು ಮೊತ್ತದ ಪಾಲಿಸಿ ಉತ್ತಮ ಎಂಬಿತ್ಯಾದಿ ಪ್ರಶ್ನೆಗಳು ಮನದಲ್ಲಿ ಹುಟ್ಟಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ವಿಮಾ ಏಜೆಂಟ್ನ ಆಯ್ಕೆ ಮಾಡಿಕೊಂಡು ಸಲಹೆ ಪಡೆಯುವುದು ಉತ್ತಮ. ನೆನಪಿಡಿ ಸರಿಯಾದ ವಿಮಾ ಏಜೆಂಟ್ ಆಯ್ಕೆ ಮಾಡುವುದು ಜೀವನದಲ್ಲಿ ವಿಮೆಯಷ್ಟೇ ಮುಖ್ಯವಾಗಿದೆ. ಹಾಗಾಗಿ ಬೆಸ್ಟ್ ಏಜೆಂಟ್ ಅನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದುರ ಬಗ್ಗೆ ಇಲ್ಲಿ ಕೆಲ ಸಲಹೆಗಳಿವೆ..
ವಿಮಾ ಏಜೆಂಟ್ ಆಯ್ಕೆ ಮಾಡುವುದು ಹೇಗೆ?
- ನೀವು ನಿರ್ದಿಷ್ಟ ಕಂಪನಿಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದರೆ, ತಕ್ಷಣ ಆ ವಿಮಾ ಕಂಪನಿಯನ್ನು ಸಂಪರ್ಕಿಸಬಹುದು. ಅವರು ತಮ್ಮ ಅಧಿಕೃತ ಏಜೆಂಟ್ ಅನ್ನು ನಿಮ್ಮ ಬಳಿಗೆ ಕಳುಹಿಸುತ್ತಾರೆ.
- IRDAI ಮಾರ್ಗಸೂಚಿಗಳ ಪ್ರಕಾರ, ಪ್ರತಿ ವಿಮಾ ಏಜೆಂಟ್ ಅಥವಾ ಸರ್ಟಿಫೈಡ್ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್ (POSP) ಜೀವ ವಿಮೆ ಅಥವಾ ಸಾಮಾನ್ಯ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಲು ಪರವಾನಗಿ ಹೊಂದಿರಬೇಕು. ಹಾಗಾಗಿ ಅಂತಹ ಪರವಾನಗಿ ಇರುವವರನ್ನೇ ಆಯ್ಕೆ ಮಾಡಬೇಕು.
- ಶೈಕ್ಷಣಿಕ ಅರ್ಹತೆಗಳು, ತರಬೇತಿ ಮತ್ತು ವೃತ್ತಿಪರ ಅರ್ಹತೆಗಳ ವಿವರಗಳನ್ನು ಏಜೆಂಟ್ ತಿಳಿದಿರಬೇಕು. ಕೆಲವು ವಿಮಾ ಏಜೆಂಟ್‌ಗಳು ಉತ್ತಮ ಅರ್ಹತೆಗಳನ್ನು ಪಡೆಯಲು ಹೆಚ್ಚುವರಿ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚುವರಿ ತರಬೇತಿ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಏಜೆಂಟ್ ಪರವಾನಗಿಯನ್ನು ಯಾವಾಗ ನೀಡಲಾಯಿತು? ಎಷ್ಟು ಅನುಭವವಿದೆ? ಎಂಬುದನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು.
- ಒಂದು ವೇಳೆ ನಿಮಗೆ ಉತ್ತಮ ವಿಮಾ ಏಜೆಂಟ್ ಸಿಗದೆ ಇದ್ದಲ್ಲಿ ನೀವು ಹಿಂದಿನ ಪಾಲಿಸಿದಾರರಿಂದ ಸಲಹೆಯನ್ನು ಪಡೆಯಬಹುದು. ಅಥವಾ ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸರಿಯಾದ ಮತ್ತು ಅನುಭವಿ ಏಜೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
- ನಿಮ್ಮ ವೈಯಕ್ತಿಕ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ಅವರಿಂದ ಸರಿಯಾದ ಏಜೆಂಟ್ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಏಕೆಂದರೆ ವೃತ್ತಿಪರ ಸಲಹೆಗಾರರು, ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ, ನಿಮಗಾಗಿ ಸರಿಯಾದ ಏಜೆಂಟ್ ಅನ್ನು ಶಿಫಾರಸು ಮಾಡುತ್ತಾರೆ. ಈ ವಿಧಾನದಿಂದ ನಿಮ್ಮ ವಿಮಾ ಏಜೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಿ.
ಗಮನಿಸಿ: ಕೆಲ ಏಜೆಂಟ್‌ಗಳು ವಿಮಾ ಪಾಲಿಸಿಯನ್ನು ಮಾರಾಟ ಮಾಡುವಾಗ, ನಿಮ್ಮನ್ನು ಮೆಚ್ಚಿಸಲು ಸುಳ್ಳು ಮಾಹಿತಿಗಳನ್ನು ನೀಡುತ್ತಾರೆ. ಈ ಪಾಲಿಸಿಯಿಂದ ಹೆಚ್ಚುವರಿ ಪ್ರಯೋಜನಗಳಿವೆ ಎಂದು ನಿಮ್ಮನ್ನು ಆಕರ್ಷಿಸುತ್ತಾರೆ. ಇಂತಹ ವಿಷಯಗಳ ಬಗ್ಗೆ ಜಾಗರೂಕರಾಗಿರುವುದು ಉತ್ತಮ. ಹಾಗೆಯೇ ಲಿಖಿತ ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ಏಜೆಂಟ್ ಕ್ಲೈಮ್ ಮಾಡಿದ ಎಲ್ಲಾ ಪ್ರಯೋಜನಗಳನ್ನು ಹೊಂದಿದೆಯೇ? ಅಥವಾ ಇಲ್ಲವೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ.
ಇದನ್ನೂ ಓದಿ: ನಿಮ್ಮ ಆಧಾರ್ ಬಳಕೆಯ ಹಿಸ್ಟರಿ ತಿಳಿಯಬೇಕೇ?: ಹಾಗಾದ್ರೆ ಈ ಸರಳ ಹಂತಗಳನ್ನು ಅನುಸರಿಸಿ