ನವದೆಹಲಿ: ಸೆಪ್ಟೆಂಬರ್ 9 ರಂದು ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ ಸಭೆಯಲ್ಲಿ ಹಲವಾರು ವಸ್ತುಗಳ ಮೇಲಿನ ಜಿಎಸ್ಟಿ ದರಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಮತ್ತು ಯಾವುದೇ ತೆರಿಗೆ ದರ ಬದಲಾವಣೆಯ ಬಗ್ಗೆ ಅದರ ಮುಂದಿನ ಸಭೆಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಅಧಿಕಾರಿಗಳ ಸಮಿತಿಯು ಜಿಎಸ್ಟಿ ಅಡಿಯಲ್ಲಿ ದರಗಳ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿಯನ್ನು ನೀಡಲಿದೆ. ನಂತರ ಅದನ್ನು ದರ ತರ್ಕಬದ್ಧಗೊಳಿಸುವ ಬಗ್ಗೆ ಸಚಿವರ ಗುಂಪಿನೊಂದಿಗೆ (ಜಿಒಎಂ) ಹಂಚಿಕೊಳ್ಳಲಾಗುವುದು ಎಂದು ಸೀತಾರಾಮನ್ ತಿಳಿಸಿದರು.
"ಅಧಿಕಾರಿಗಳ ಸಮಿತಿಯು ಜಿಎಸ್ಟಿ ಅಡಿಯಲ್ಲಿ ವಸ್ತುಗಳ ಮೇಲಿನ ದರಗಳ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿಯನ್ನು ನೀಡುತ್ತದೆ. ನಂತರ ಈ ಬಗ್ಗೆ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಆದರೆ ಈ ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಈ ಕೌನ್ಸಿಲ್ ಸಭೆಯ ನಂತರ, ಜಿಒಎಂ ಸಭೆ ಸೇರಿ ಮತ್ತಷ್ಟು ಚರ್ಚಿಸಲಿದೆ. ಅದಾದ ನಂತರ ಕೌನ್ಸಿಲ್ ಈ ವಿಷಯದ ಬಗ್ಗೆ ಮತ್ತೆ ಸಭೆ ಸೇರಿ ಚರ್ಚಿಸಲಿದೆ" ಎಂದು ಅವರು ಹೇಳಿದರು.
ಜಿಎಸ್ಟಿ ಅಡಿಯಲ್ಲಿ ದರಗಳ ತರ್ಕಬದ್ಧಗೊಳಿಸುವಿಕೆ ಮತ್ತು ಸ್ಲ್ಯಾಬ್ಗಳನ್ನು ಬದಲಾಯಿಸುವುದು ಈ ಎರಡೂ ವಿಷಯಗಳು ಚರ್ಚೆಯಾಗಲಿವೆ. ಒಂದಾದ ನಂತರ ಒಂದರಂತೆ ಪ್ರತಿಯೊಂದು ವಸ್ತುವಿನ ಬಗ್ಗೆ ಚರ್ಚೆಗಳು ನಡೆಯಲಿವೆ ಮತ್ತು ಪ್ರಸ್ತುತ ದರಗಳನ್ನು ಆದಾಯ ತಟಸ್ಥ ದರದೊಂದಿಗೆ ಹೋಲಿಕೆ ಮಾಡಲಾಗುವುದು. ಜಿಎಸ್ಟಿ ಅಡಿಯಲ್ಲಿ ವಸ್ತುಗಳು ಅಥವಾ ತೆರಿಗೆ ಸ್ಲ್ಯಾಬ್ಗಳಲ್ಲಿ ದೊಡ್ಡ ಮಟ್ಟದ ದರ ಬದಲಾವಣೆಯಿಂದ ರಾಜ್ಯಗಳು ಮತ್ತು ಕೇಂದ್ರ ಎರಡಕ್ಕೂ ಆದಾಯದ ನಷ್ಟವಾಗುವುದರಿಂದ ಆದಾಯ ತಟಸ್ಥತೆಯನ್ನು ಕಾಪಾಡಿಕೊಳ್ಳುವುದು ಈ ಹಿಂದಿನ ಸಭೆಗಳಲ್ಲಿ ಪ್ರಮುಖ ಕಾಳಜಿಯ ವಿಷಯವಾಗಿತ್ತು.
ಮುಖ್ಯ ಆರ್ಥಿಕ ಸಲಹೆಗಾರರ ವರದಿಯು ಆದಾಯ ತಟಸ್ಥ ದರವನ್ನು ಶೇಕಡಾ 15.3 ಕ್ಕೆ ನಿಗದಿಪಡಿಸಿದ್ದರೆ, ಸರಾಸರಿ ಜಿಎಸ್ಟಿ ದರವು ಮೇ 2017 ರಲ್ಲಿ ಶೇಕಡಾ 14.4 ರಷ್ಟಿತ್ತು ಮತ್ತು ನಂತರ ಸೆಪ್ಟೆಂಬರ್ 2019 ರ ವೇಳೆಗೆ ಶೇಕಡಾ 11.6 ಕ್ಕೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅಧ್ಯಯನವು ತೋರಿಸಿದೆ. ಈಗ ಈ ಸರಾಸರಿ ಜಿಎಸ್ಟಿ ದರವು ಈ ಹಿಂದೆ ಕಂಡುಬಂದ ಶೇಕಡಾ 11.6 ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಶೂನ್ಯ, ಶೇ 5, ಶೇ 12, ಶೇ 18 ಮತ್ತು ಶೇ 28 ಹೀಗೆ ಐದು ಪ್ರಮುಖ ತೆರಿಗೆ ಸ್ಲ್ಯಾಬ್ ಗಳನ್ನು ಜಿಎಸ್ ಟಿ ಹೊಂದಿದೆ. ಡಿಮೆರಿಟ್ ಮತ್ತು ಐಷಾರಾಮಿ ಸರಕುಗಳ ಮೇಲೆ ಶೇಕಡಾ 1 ರಿಂದ 290 ರವರೆಗೆ ಪರಿಹಾರ ಸೆಸ್ ವಿಧಿಸಲಾಗುತ್ತದೆ. ಶೇ 5 ಮತ್ತು ಶೇ 12ರ ಸ್ಲ್ಯಾಬ್ ಗಳು ಅಥವಾ ಶೇ 12 ಮತ್ತು ಶೇ 18ರ ಸ್ಲ್ಯಾಬ್ ಗಳ ವಿಲೀನದ ಬಗ್ಗೆ ಈ ಹಿಂದೆಯೂ ಚರ್ಚಿಸಲಾಗಿತ್ತು.
ಇದನ್ನೂ ಓದಿ : ಈಜಿಪ್ಟ್ನ ಪಶ್ಚಿಮ ಮರುಭೂಮಿಯಲ್ಲಿ ಹೊಸ ಪೆಟ್ರೋಲಿಯಂ ನಿಕ್ಷೇಪ ಪತ್ತೆ - new oil discovery