ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆದಾರರ ಸೆಳೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಯಾಟಲೈಟ್ ಬಿಡಿಭಾಗಗಗಳ ತಯಾರಿಕೆಯಲ್ಲಿ ಶೇಕಡಾ 100 ರಷ್ಟು ವಿದೇಶ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಗೆ ಅವಕಾಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಾಗರೋತ್ತರ ಹೂಡಿಕೆದಾರರು ಮತ್ತು ಖಾಸಗಿ ಕಂಪನಿಗಳನ್ನು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಆಕರ್ಷಿಸುವ ಉದ್ದೇಶದಿಂದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಸರ್ಕಾರ ಸಡಿಲಿಸಿದೆ. ಪ್ರಸ್ತುತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಎಫ್‌ಡಿಐ ಅನ್ನು ಸರ್ಕಾರದ ಅನುಮತಿಯೊಂದಿಗೆ ಉಪಗ್ರಹಗಳ ಬಿಡಿಭಾಗಗಳ ತಯಾರಿ, ಅವುಗಳ ಕಾರ್ಯಾಚರಣೆ ಕ್ಷೇತ್ರದಲ್ಲಿ 100 ಪ್ರತಿಶತದವರೆಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ.
ಪ್ರಸ್ತುತ ನೀತಿಯಲ್ಲಿನ ಬದಲಾವಣೆಯಿಂದ ಉಪಗ್ರಹಗಳ ತಯಾರಿಕೆ ಮತ್ತು ಕಾರ್ಯಾಚರಣೆ, ಉಪಗ್ರಹ ಡೇಟಾ ಉತ್ಪನ್ನಗಳ ವಿಭಾಗಗಳಲ್ಲಿ ಸ್ವಯಂಚಾಲಿತವಾಗಿ ಶೇಕಡಾ 74 ರಷ್ಟು ಎಫ್‌ಡಿಐ ಹೂಡಿಕೆ ಮಾಡಬಹುದಾಗಿದೆ. ಈ ಮಿತಿಯನ್ನು ಮೀರಿ ಹೆಚ್ಚಿನ ಎಫ್‌ಡಿಐ ಹೂಡಿಕೆಗಾಗಿ ಸರ್ಕಾರದ ಅನುಮತಿ ಅಗತ್ಯವಿದೆ.
ಉಡಾವಣಾ ವಾಹನಗಳು ಮತ್ತು ಅದಕ್ಕೆ ಸಂಬಂಧಿತ ಉಪಕರಣಗಳಲ್ಲಿ ಶೇಕಡಾ 49 ರಷ್ಟು ನೇರವಾಗಿ ಎಫ್‌ಡಿಐ ಹೂಡಿಕೆಗೆ ಅನುಮತಿಸಲಾಗಿದೆ. ಈ ಮಿತಿಗಿಂತ ಹೆಚ್ಚಿನ ಹೂಡಿಕೆಗೆ ಸರ್ಕಾರದ ಅನುಮೋದನೆ ಪಡೆದಿಕೊಳ್ಳಬೇಕು ಎಂದು ಸಂಪುಟ ತೀರ್ಮಾನಿಸಿದೆ.
ಉದ್ಯೋಗ ಸೃಷ್ಟಿ- ತಂತ್ರಜ್ಞಾನ ಬೆಳವಣಿಗೆ: ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಿಂದ (ಎಫ್‌ಡಿಐ) ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಿ ವಿಶ್ವದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರ ಅಗಾಧ ವಿಸ್ತರಣೆ ಪಡೆಯಲಿದೆ ಎಂದು ಊಹಿಸಲಾಗಿದೆ. ಜೊತೆಗೆ ಈ ಕ್ಷೇತ್ರವು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ವಿದೇಶಿ ಬಂಡವಾಳ ಹೂಡಿಕೆಗಾಗಿ ಈ ಕ್ಷೇತ್ರವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಇದರಿಂದ ವಿದೇಶಿ ಕಂಪನಿಗಳು ದೇಶಕ್ಕೆ ಬಂದು ಉತ್ಪಾದನೆ ಹೆಚ್ಚಿಸುವುದರಿಂದ ಮೇಕ್ ಇನ್ ಇಂಡಿಯಾಗೂ ಬಲ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹವಾಮಾನ ಉಪಗ್ರಹವಾದ ಇನ್ಸಾಟ್ - 3ಡಿಎಸ್ ಅನ್ನು ಇಸ್ರೋ ಉಡಾವಣೆ ಮಾಡಿದೆ. GSLV F14 ರಾಕೆಟ್ ಸಹಾಯದಿಂದ ಇದನ್ನು ಉಡಾವಣೆ ಮಾಡಲಾಗಿದೆ. ಇಲ್ಲಿಯವರೆಗೆ ಎಲ್ಲವೂ ಯೋಜನೆಯಂತೆ ಸರಿಯಾಗಿ ನಡೆಯುತ್ತಿದೆ. ಈ ಉಪಗ್ರಹ ಕಾರ್ಯ ನಿರ್ವಹಿಸಿದ ನಂತರ ನಿಖರವಾದ ಹವಾಮಾನ ಸಂಬಂಧಿತ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ, ನೈಸರ್ಗಿಕ ವಿಕೋಪಗಳ ಬಗ್ಗೆ ಮುಂಗಡ ಮಾಹಿತಿಯೂ ಲಭ್ಯವಿರುತ್ತದೆ. ಇದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: ಚಂದ್ರನ ಮೇಲಿನ ಮಣ್ಣು ಭೂಮಿಗೆ ತರಲು ಇಸ್ರೋದಿಂದ ಚಂದ್ರಯಾನ-4 ಯೋಜನೆ?