ನವದೆಹಲಿ : ಭಾರತದ ವಿದ್ಯುತ್ ಬಳಕೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಜೂನ್ನಲ್ಲಿ ಸುಮಾರು 9 ಪ್ರತಿಶತದಷ್ಟು ಏರಿಕೆಯಾಗಿ 152.38 ಬಿಲಿಯನ್ ಯೂನಿಟ್ಗಳಿಗೆ (ಬಿಯು) ತಲುಪಿದೆ. ಅತಿಯಾದ ಬಿಸಿಲು ಮತ್ತು ಹೀಟ್ ವೇವ್ ಕಾರಣದಿಂದ ಹವಾನಿಯಂತ್ರಕಗಳು ಮತ್ತು ಕೂಲರ್ಗಳ ಅತಿಯಾದ ಬಳಕೆ ಕೂಡ ಅತ್ಯಧಿಕ ವಿದ್ಯುತ್ ಬಳಕೆಗೆ ಒಂದು ಪ್ರಮುಖ ಕಾರಣವಾಗಿದೆ.
ಜೂನ್ನಲ್ಲಿ ವಿದ್ಯುಚ್ಛಕ್ತಿ ಬಳಕೆ ಪ್ರಮಾಣ: ಅಧಿಕೃತ ಅಂಕಿ - ಅಂಶಗಳ ಪ್ರಕಾರ ಜೂನ್ 2023 ರಲ್ಲಿ ವಿದ್ಯುತ್ ಬಳಕೆ 140.27 ಬಿಲಿಯನ್ ಯೂನಿಟ್ ಆಗಿತ್ತು. ಒಂದು ದಿನದಲ್ಲಿ ಪೂರೈಕೆ (ಗರಿಷ್ಠ ವಿದ್ಯುತ್ ಬೇಡಿಕೆ) ಮಾಡಲಾದ ಗರಿಷ್ಠ ವಿದ್ಯುತ್ ಪ್ರಮಾಣ ಜೂನ್ 2024 ರಲ್ಲಿ 245.41 ಗಿಗಾವ್ಯಾಟ್ಗೆ ಏರಿಕೆಯಾಗಿದೆ. ಜೂನ್ 2023 ರಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 224.10 ಗಿಗಾವ್ಯಾಟ್ ಆಗಿತ್ತು.
ಈ ವರ್ಷದ ಮೇ ತಿಂಗಳಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ಗರಿಷ್ಠ 250.20 ಗಿಗಾವ್ಯಾಟ್ ತಲುಪಿದೆ. ಈ ಹಿಂದೆ ಸೆಪ್ಟೆಂಬರ್ 2023 ರಲ್ಲಿ ಸಾರ್ವಕಾಲಿಕ ಗರಿಷ್ಠ 243.27 ಗಿಗಾವ್ಯಾಟ್ ವಿದ್ಯುತ್ ಬೇಡಿಕೆ ದಾಖಲಾಗಿತ್ತು.
ಸಂಭವನೀಯ ಗರಿಷ್ಠ ವಿದ್ಯುತ್ ಬೇಡಿಕೆ: ಈ ವರ್ಷದ ಆರಂಭದಲ್ಲಿ, ವಿದ್ಯುತ್ ಸಚಿವಾಲಯವು ಮೇ 2024 ರಲ್ಲಿ ಹಗಲಿನಲ್ಲಿ 235 ಗಿಗಾವ್ಯಾಟ್ ಮತ್ತು ಸಂಜೆ ಸಮಯದಲ್ಲಿ 225 ಗಿಗಾವ್ಯಾಟ್, ಜೂನ್ 2024ರಲ್ಲಿ ಹಗಲಿನಲ್ಲಿ 240 ಗಿಗಾವ್ಯಾಟ್ ಮತ್ತು ಸಂಜೆ ಸಮಯದಲ್ಲಿ 235 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆ ಬರಬಹುದು ಎಂದು ಅಂದಾಜಿಸಿತ್ತು. ಈ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 260 ಗಿಗಾವ್ಯಾಟ್ ತಲುಪಬಹುದು ಎಂದು ಸಚಿವಾಲಯ ಅಂದಾಜಿಸಿದೆ.
ಅಧಿಕ ವಿದ್ಯುತ್ ಬಳಕೆಯ ಕಾರಣಗಳು: ದೇಶದ ಅನೇಕ ಭಾಗಗಳಲ್ಲಿ ವಿಪರೀತ ಬಿಸಿಲು ಹಾಗೂ ಶಾಖದ ಅಲೆಯ ಕಾರಣದಿಂದ ಫ್ಯಾನ್ ಹಾಗೂ ಕೂಲರ್ಗಳ ಬಳಕೆ ಹೆಚ್ಚಾಗಿತ್ತು. ಇದು ಅಧಿಕ ವಿದ್ಯುತ್ ಖರ್ಚಾಗಲು ಕಾರಣವಾಗಿದೆ. ಈಗಲೂ ದೇಶದ ಹಲವಾರು ಭಾಗಗಳಲ್ಲಿ ಬಿಸಿಗಾಳಿಯ ಪ್ರಕೋಪ ಮುಂದುವರೆದಿರುವುದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಮತ್ತು ಬಳಕೆ ಸ್ಥಿರವಾಗಿ ಮುಂದುವರಿಯಲಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಪ್ರಕಾರ, ಮುಂದಿನ 2 ರಿಂದ 3 ದಿನಗಳಲ್ಲಿ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಉಳಿದ ಭಾಗಗಳಿಗೆ ನೈಋತ್ಯ ಮಾನ್ಸೂನ್ ಮತ್ತಷ್ಟು ಮುಂದುವರಿಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ. ಸೋಮವಾರದ ಇತ್ತೀಚಿನ ಬುಲೆಟಿನ್ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಮಾನ್ಸೂನ್ ಇಡೀ ದೇಶವನ್ನು ಆವರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಬ್ಯಾಂಕುಗಳಿಗೆ ಮರಳಿದ ಶೇ 97.87ರಷ್ಟು 2,000 ಮುಖಬೆಲೆಯ ನೋಟುಗಳು: ಆರ್ಬಿಐ - 2000 currency notes