ನವದೆಹಲಿ: ನಗರಗಳಲ್ಲಿನ ಅನಿಲ ವಿತರಕರಿಗೆ ಪೂರೈಸಲಾಗುವ ಅಗ್ಗದ ದೇಶೀಯ ಅನಿಲ ಪೂರೈಕೆಯನ್ನು ಸರ್ಕಾರ ಸುಮಾರು ಶೇಕಡಾ 20 ರಷ್ಟು ಕಡಿತಗೊಳಿಸಿದ್ದರಿಂದ ದೇಶಾದ್ಯಂತ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ಸರ್ಕಾರವು ಬೆಲೆ-ನಿಯಂತ್ರಿತ ದೇಶೀಯ ಅನಿಲ ಅಥವಾ ಎಪಿಎಂ ಅನಿಲವನ್ನು ಸಿಎನ್ಜಿ ವಾಹನಗಳ ಚಾಲಕರಿಗೆ ಮತ್ತು ಮನೆಗಳಿಗೆ ಮಾರಾಟ ಮಾಡಲು ಅನಿಲ ವಿತರಕರಿಗೆ ಹಂಚಿಕೆ ಮಾಡುತ್ತದೆ. ಈ ರೀತಿಯ ಅನಿಲ ಪೂರೈಕೆಯನ್ನು ಸದ್ಯ ಸರ್ಕಾರವು ಶೇ 20ರಷ್ಟು ಕಡಿತ ಮಾಡಿದೆ. ಸದ್ಯ ಈ ಕಡಿತದಿಂದ ಗೃಹಬಳಕೆದಾರರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲವಾದರೂ ಸಿಎನ್ಜಿ ಬೆಲೆಗಳು ಹೆಚ್ಚಾಗಬಹುದು ಎಂದು ನಗರ ಅನಿಲ ವಿತರಕ ಕಂಪನಿಗಳು ತಿಳಿಸಿವೆ.
ಅಕ್ಟೋಬರ್ 16 ರಿಂದ ಕಂಪನಿಗೆ ಶೇಕಡಾ 21ರಷ್ಟು ಕಡಿಮೆ ಎಪಿಎಂ ಅನಿಲ ಪೂರೈಕೆಯಾಗುತ್ತಿರುವುದರಿಂದ ಕಂಪನಿಯ ಲಾಭ ಕಡಿಮೆಯಾಗುತ್ತಿದೆ ಎಂದು ದೇಶದ ಅತಿದೊಡ್ಡ ನಗರ ಅನಿಲ ವಿತರಕ ಕಂಪನಿಯಾಗಿರುವ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಹೇಳಿದೆ.
ಐಜಿಎಲ್ ಮತ್ತು ಇತರ ಸ್ಥಾಪಿತ ನಗರ ಅನಿಲ ನಿರ್ವಾಹಕರಿಗೆ, ಅಗ್ಗದ ದೇಶೀಯ ಅನಿಲ ಪೂರೈಕೆಯ ಪಾಲು ಈಗ ಅವು ಮಾರಾಟ ಮಾಡುವ ಸಿಎನ್ಜಿ ಮಾರಾಟದ ಸುಮಾರು ಶೇ 50 ಕ್ಕೆ ಇಳಿದಿದೆ. ಇದು ಮಂಗಳವಾರದವರೆಗೆ ಸುಮಾರು ಶೇ 68ರಷ್ಟು ಮತ್ತು ಕಳೆದ ಅಕ್ಟೋಬರ್ನಲ್ಲಿ ಸುಮಾರು ಶೇ 88 ಕ್ಕಿಂತ ತೀವ್ರವಾಗಿ ಕಡಿಮೆಯಾಗಿದೆ.
ನೈಸರ್ಗಿಕ ಅನಿಲವನ್ನು ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿಗಳಲ್ಲಿ ಸಮುದ್ರ ತಳಗಳು ಸೇರಿದಂತೆ ಭಾರತದೊಳಗೆ ನೆಲದಾಳದಿಂದ ಪಂಪ್ ಮಾಡಿ ಹೊರ ತೆಗೆಯಲಾಗುತ್ತದೆ ಮತ್ತು ಇದೇ ಅನಿಲವು ಸಿಎನ್ಜಿ ತಯಾರಿಸುವ ಕಚ್ಚಾ ವಸ್ತುವಾಗಿದೆ. ಪಂಪ್ ಮಾಡಿ ಹೊರತೆಗೆಯಲಾದ ಅನಿಲವನ್ನು ವಾಹನಗಳಲ್ಲಿ ಬಳಸಲು ಸಿಎನ್ಜಿಯಾಗಿ ಮತ್ತು ಮನೆಗಳಲ್ಲಿ ಬಳಸಲು ಅಡುಗೆ ಅನಿಲವಾಗಿ ಪರಿವರ್ತಿಸಲಾಗುತ್ತದೆ.
ಆದರೆ ಸರ್ಕಾರದಿಂದ ನಿಯಂತ್ರಿಸಲ್ಪಡುವ ಮತ್ತು ನಗರ ಅನಿಲ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸಲಾಗುವ ಸಾಂಪ್ರದಾಯಿಕ ತೈಲ ಉತ್ಪಾದನೆಯು ನೈಸರ್ಗಿಕವಾಗಿ ವಾರ್ಷಿಕ ಶೇಕಡಾ 5 ರಷ್ಟು ಕುಸಿಯುತ್ತಿದೆ. ಇದನ್ನು ಸರಿದೂಗಿಸಲು ನಗರ ಅನಿಲ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸಲಾಗುವ ಸಿಎನ್ಜಿಯ ಪೂರೈಕೆಯನ್ನು ಕಡಿಮೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ನಗರ ಅನಿಲ ಚಿಲ್ಲರೆ ವ್ಯಾಪಾರಿಗಳು ಈ ಪೂರೈಕೆ ಕೊರತೆಯನ್ನು ಸರಿದೂಗಿಸಲು ದುಬಾರಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ ಜಿ)ವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಇದರಿಂದ ಸಿಎನ್ಜಿ ಬೆಲೆ ಕೆಜಿಗೆ 4 ರಿಂದ 6 ರೂ.ಗಳಷ್ಟು ಹೆಚ್ಚಾಗಲಿದೆ.
ಇದನ್ನೂ ಓದಿ : ಚೀನಾ ಹಿಂದಿಕ್ಕಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾದ ಭಾರತ