ಬೆಂಗಳೂರು: ದೊಡ್ಡಬಳ್ಳಾಪುರದ ಬಳಿ 25 ಸಾವಿರ ಕೋಟಿ ರೂ. ಹೂಡಿಕೆ ಮೂಲಕ ತನ್ನ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿಗೆ ಅಗತ್ಯ ಮೂಲಸೌಲಭ್ಯಗಳ ಜೊತೆಗೆ ಎಲ್ಲ ನೆರವನ್ನೂ ಕೊಡಲಾಗುವುದು. ಇದಲ್ಲದೆ, ರಾಜ್ಯದಲ್ಲಿ ಇನ್ನೂ ಹೆಚ್ವು ಹೆಚ್ಚು ಹೂಡಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಫಾಕ್ಸ್ ಕಾನ್ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗಕ್ಕೆ ಶುಕ್ರವಾರ ರಾತ್ರಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಸಿಎಂ ಮಾತನಾಡಿದರು. ಫಾಕ್ಸ್ ಕಾನ್ ಕಂಪನಿಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ಕೊಡಲಾಗುವುದು. ನೀರು, ವಿದ್ಯುತ್, ರಸ್ತೆ, ಕಾನೂನು ಮತ್ತು ಇತ್ಯಾದಿಗಳನ್ನೆಲ್ಲ ನಾವು ಒದಗಿಸಲಿದ್ದೇವೆ. ಕಂಪನಿಯು ಫ್ಯಾಬ್ ಉದ್ಯಮ ವಲಯ ಸೇರಿದಂತೆ ಮಿಕ್ಕ ವಲಯಗಳಲ್ಲೂ ಹೆಚ್ಚು ಹೂಡಿಕೆ ಮಾಡಲು ಒಲವು ತೋರಿಸಬೇಕು. ರಾಜ್ಯವು ಅತ್ಯುತ್ತಮ ಮೌಲ್ಯಗಳಿಂದ ಕೂಡಿರುವ ಕೈಗಾರಿಕಾ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯವು ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಒತ್ತು ಕೊಟ್ಟಿದೆ ಎಂದು ಆಶ್ವಾಸನೆ ನೀಡಿದರು.
Had a productive discussion with Mr. Young Liu, Chairman of Foxconn. Karnataka, with its rich cultural heritage and robust law and order, is well-positioned to create a synergy that will drive long-lasting growth and innovation.
— Siddaramaiah (@siddaramaiah) August 16, 2024
We are paving the way for a future where… pic.twitter.com/8A1UnqYgLj
ಇದಕ್ಕೆ ಸ್ಪಂದಿಸಿದ ಯಂಗ್ ಲಿಯು, 'ರಾಜ್ಯದಲ್ಲಿ ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿರುವ ಘಟಕವು ಚೀನಾದ ನಂತರದ ಎರಡನೇ ಅತ್ಯಂತ ಬೃಹತ್ ಘಟಕವಾಗಿದೆ. ಇಲ್ಲಿ 40,000 ಮಧ್ಯಮ ಸ್ತರದ ವಿದ್ಯಾವಂತರಿಗೆ ಉದ್ಯೋಗಾವಕಾಶ ಸಿಗಲಿದೆ. ಇವರನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಜೊತೆಗೆ, ನಮ್ಮ ಹೂಡಿಕೆ ಇಷ್ಟಕ್ಕೇ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಪರಸ್ಪರ ವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು' ಎಂದು ಹೇಳಿದರು.
'ಉದ್ಯೋಗಿಗಳಿಗೆ ಮನೆಗಿಂತಲೂ ಹೆಚ್ಚಿನ ನೆಮ್ಮದಿಯ ವಾತಾವರಣ ಇರಲಿದೆ. ಇವರಿಗೆ ಗುಣಮಟ್ಟದ ಮನೋರಂಜನೆ, ಜಿಮ್, ವಸತಿ ಸೌಲಭ್ಯ, ಆಹಾರ ಎಲ್ಲವನ್ನೂ ಫಾಕ್ಸ್ ಕಾನ್ ಕಂಪನಿ ಒದಗಿಸಲಿದೆ. ಈ ಮೂಲಕ ಜಾಗತಿಕ ಗುಣಮಟ್ಟದ ಕೈಗಾರಿಕಾ ಪರಿಸರ ನಿರ್ಮಿಸಲಾಗುವುದು' ಎಂದು ನುಡಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, 'ರಾಜ್ಯವು ಹೆಚ್ಚಿನ ಹೂಡಿಕೆಯನ್ನು ಮುಕ್ತವಾಗಿ ಸ್ವಾಗತಿಸಲಿದೆ. ಕೆಐಎಡಿಬಿ, ಕೆಪಿಟಿಸಿಎಲ್, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿಗಳು ಫಾಕ್ಸ್ ಕಾನ್ ಕಂಪನಿಯ ಯೋಜನೆಯು ಸುಗಮವಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ಬದ್ಧತೆಯಿಂದ ಶ್ರಮಿಸುತ್ತಿವೆ. ಕಂಪನಿಗೆ ಈಗಾಗಲೇ 300 ಎಕರೆ ಭೂಮಿಯನ್ನು ಕೊಡಲಾಗಿದೆ' ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 'ರಾಜ್ಯವು ದೇಶದಲ್ಲೇ ಅತ್ಯುತ್ತಮವಾದ ಉದ್ಯಮಸ್ನೇಹಿ ನೀತಿಯನ್ನು ಹೊಂದಿದೆ. ಫಾಕ್ಸ್ ಕಾನ್ ಕಂಪನಿಯು ಇಲ್ಲಿಗೆ ಬರುತ್ತಿರುವುದು ಸ್ವಾಗತಾರ್ಹ' ಎಂದು ಹೇಳಿದರು.
ಸಭೆಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಐಟಿ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಮುಂತಾದವರು ಇದ್ದರು.
ಇದನ್ನೂ ಓದಿ: ಮುಂದಿನ 4 ವಾರ ಭಾರಿ ಮಳೆ ಮುನ್ಸೂಚನೆ: ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಎಂ ಸೂಚನೆ - Rain Precautionary Measures