ಬ್ಯಾಂಕ್ ನೌಕರರು ಬಹಳ ದಿನಗಳಿಂದ ವಾರದಲ್ಲಿ ಐದು ದಿನ ಕೆಲಸಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವರ್ಷಾಂತ್ಯಕ್ಕೆ ಬ್ಯಾಂಕ್ ನೌಕರರ ಈ ಆಸೆ ಈಡೇರುವ ಸಾಧ್ಯತೆ ಇದೆ. ವಾರದಲ್ಲಿ ಎರಡು ಸಾಪ್ತಾಹಿಕ ರಜೆಗಳಿಗೆ ಸಂಬಂಧಿಸಿದಂತೆ ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ) ಮತ್ತು ನೌಕರರ ಒಕ್ಕೂಟಗಳ ನಡುವೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಮಾತ್ರವೇ ನೀಡಬೇಕಿದೆ. 2024ರ ಅಂತ್ಯದ ವೇಳೆಗೆ ಇದನ್ನೂ ಸರ್ಕಾರ ಅನುಮೋದಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಕೆಲಸದ ಸಮಯ ಹೆಚ್ಚಳ!: ವಾರದಲ್ಲಿ 5 ದಿನ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದರೂ ಗ್ರಾಹಕರಿಗೆ ಒದಗಿಸುವ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬ್ಯಾಂಕ್‌ಗಳ ಸಂಘ, ನೌಕರರ ಒಕ್ಕೂಟ ಭರವಸೆ ನೀಡಿದೆ. ಹೀಗಾಗಿ ಕೆಲಸದ ಅವಧಿಯನ್ನು ಹೆಚ್ಚಿಸುವುದು ಸ್ಪಷ್ಟವಾಗಿದೆ. 2023ರ ಡಿಸೆಂಬರ್ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಸೇರಿದಂತೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್, ಬ್ಯಾಂಕ್ ಒಕ್ಕೂಟಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಗಿದೆ.
ಇದರ ಪ್ರಕಾರ, ಬ್ಯಾಂಕ್‌ಗಳು ವಾರದಲ್ಲಿ 5 ದಿನ ಮಾತ್ರ ಕಾರ್ಯನಿರ್ವಹಿಸಬೇಕು. ಆದರೆ, ಇದಕ್ಕೆ ಸರ್ಕಾರದ ಸಮ್ಮತಿ ಬಾಕಿ ಇದೆ. ಅಲ್ಲದೇ, 2024ರ ಮಾರ್ಚ್ 8ರಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಐಬಿಎ ಮತ್ತು ಬ್ಯಾಂಕ್ ಯೂನಿಯನ್‌ಗಳು 9ನೇ ಜಂಟಿ ಟಿಪ್ಪಣಿಗೆ ಸಹಿ ಹಾಕಿದೆ. ಈ ಪ್ರಕಾರ ಶನಿವಾರ ಮತ್ತು ಭಾನುವಾರ ರಜೆ ದಿನ ಇದರಲಿದೆ.
ಡಿಸೆಂಬರ್ನಿಂದಲೇ ಜಾರಿ!?: ಐಬಿಎ ಮತ್ತು ಬ್ಯಾಂಕ್ ಒಕ್ಕೂಟಗಳು ಒಮ್ಮತದಿಂದ ಕೂಡಿದ್ದರೂ, ಅಂತಿಮ ನಿರ್ಧಾರವನ್ನು ಸರ್ಕಾರ ಮಾತ್ರ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬ್ಯಾಂಕ್‌ನ ಕೆಲಸದ ಸಮಯ ಮತ್ತು ಆಂತರಿಕ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯೊಂದಿಗೆ ಈ ಪ್ರಸ್ತಾಪವನ್ನು ಚರ್ಚಿಸುವ ಸಾಧ್ಯತೆಯಿದೆ.
ಆದರೆ, ಈ ಚರ್ಚೆ ಎಂದಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಕೆಲವು ಬ್ಯಾಂಕ್ ಉದ್ಯೋಗಿಗಳು ಈ ವರ್ಷದ ಅಂತ್ಯದ ವೇಳೆಗೆ ಅಥವಾ 2025ರ ಆರಂಭದಲ್ಲಿ ಪ್ರಸ್ತಾವನೆಯನ್ನು ಅನುಮೋದಿಸುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರವು ತನ್ನ ಅನುಮೋದನೆಯನ್ನು ನೀಡಿದರೆ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 25ರ ಪ್ರಕಾರ, ಮುಂದಿನ ದಿನಗಳಲ್ಲಿ ಎಲ್ಲ ಶನಿವಾರಗಳನ್ನು ಅಧಿಕೃತ ರಜಾದಿನಗಳಾಗಿ ಪರಿಗಣಿಸಲಾಗುತ್ತದೆ. ಇದೇ ವೇಳೆ, ಡಿಸೆಂಬರ್ನಿಂದ ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಬರಬಹುದು.
ಬ್ಯಾಂಕ್ ಸಮಯ ಏನಾಗಲಿದೆ?: ವಾರದಲ್ಲಿ ಕೇವಲ 5 ಕೆಲಸದ ದಿನಗಳು ಇದ್ದರೆ, ನಂತರ ಬ್ಯಾಂಕ್‌ಗಳ ಕೆಲಸದ ಸಮಯ ಹೆಚ್ಚಾಗುವ ಸಾಧ್ಯತೆಯಿದೆ. ಬ್ಯಾಂಕ್‌ಗಳು ದಿನದಲ್ಲಿ ಹೆಚ್ಚುವರಿ 40 ನಿಮಿಷಗಳ ಕಾಲ ಕಾರ್ಯನಿರ್ವಹಿಸಬಹುದು. ಅಂದರೆ ಬ್ಯಾಂಕ್ ಕೆಲಸದ ಸಮಯ ಬೆಳಗ್ಗೆ 9:45ರಿಂದ ಸಂಜೆ 5:30 ರವರೆಗೆ ಇರುತ್ತದೆ. ಇದು ಬ್ಯಾಂಕ್ ತನ್ನ ಗ್ರಾಹಕರಿಗೆ ಮತ್ತು ಖಾತೆದಾರರಿಗೆ ಯಾವುದೇ ತೊಂದರೆಯಿಲ್ಲದೆ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
ಪ್ರಸ್ತುತ, ಎಲ್ಲ ಬ್ಯಾಂಕ್‌ಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಲಾಗುತ್ತದೆ. ವಾಸ್ತವವಾಗಿ, ಬ್ಯಾಂಕ್ ಯೂನಿಯನ್‌ಗಳು 2015ರಿಂದ ಎಲ್ಲ ಶನಿವಾರ ಮತ್ತು ಭಾನುವಾರ ರಜೆಗೆ ಒತ್ತಾಯಿಸುತ್ತಿವೆ. 2015ರಲ್ಲಿ ನಡೆದ 10ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಮಾತ್ರ ರಜೆ ಎಂದು ಘೋಷಿಸಲು ಒಪ್ಪಿಕೊಂಡಿತ್ತು.
ಇದನ್ನೂ ಓದಿ: ಭಾರತದ ಷೇರು ಮಾರುಕಟ್ಟೆ ಬಂಡವಾಳೀಕರಣ ಶೇ 14ರಷ್ಟು ಏರಿಕೆ: ಇದು ವಿಶ್ವದಲ್ಲೇ ಅತ್ಯಧಿಕ