ವೃದ್ಧಾಪ್ಯದಲ್ಲಿ ಜನರು ಆರ್ಥಿಕ ನೆರವು ಪಡೆಯಲು ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ 60 ವರ್ಷಗಳ ನಂತರ ತಿಂಗಳಿಗೆ 5,000 ರೂಪಾಯಿ ಪಿಂಚಣಿ ಸಿಗಲಿದೆ. ವೃದ್ಧಾಪ್ಯದಲ್ಲಿ ಯಾರ ಸಹಾಯವೂ ಇಲ್ಲದೇ ಕೇಂದ್ರದಿಂದ ಬರುವ ಈ ಪಿಂಚಣಿಯಿಂದ ನೆಮ್ಮದಿಯ ಜೀವನ ನಡೆಸಬಹುದು.
ಹೆಚ್ಚಿನ ಸಂಖ್ಯೆಯ ಬಡವರು ಮತ್ತು ಸಾಮಾನ್ಯ ಜನರಿಗೆ ಪಿಂಚಣಿ ಯೋಜನೆಗಳಲ್ಲಿ ದೊಡ್ಡ ಮೊತ್ತ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇಂತಹವರಿಗೆ ಅಟಲ್ ಪಿಂಚಣಿ ಯೋಜನೆ (ಎಪಿವೈ) ತುಂಬಾ ಸೂಕ್ತವಾಗಿದೆ. ದಿನಕ್ಕೆ ಕೇವಲ 13 ರೂಪಾಯಿ ಪಾವತಿಸುವ ಮೂಲಕ ಈ ಯೋಜನೆಗೆ ಸೇರಬಹುದು.
2015-16ರಲ್ಲಿ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕಡಿಮೆ ಆದಾಯದ ಗುಂಪಿಗೆ ಸೇರಿದ ಜನರಿಗಾಗಿಯೇ ಇದನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಡಿ ತಿಂಗಳು 1,000 ರೂಪಾಯಿಯಿಂದ ಗರಿಷ್ಠ 5,000 ರೂ. ಪಿಂಚಣಿ ಪಡೆಯಬಹುದು. ನಿಮ್ಮ ಹೂಡಿಕೆಯ ಜೊತೆಗೆ ಸರ್ಕಾರವು ವರ್ಷಕ್ಕೆ 1,000 ರೂಪಾಯಿವರೆಗೆ ನೆರವು ಒದಗಿಸುತ್ತದೆ.
ಯೋಜನೆಯ ಮಾನದಂಡಗಳೇನು?: ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, 18ರಿಂದ 40 ವರ್ಷದೊಳಗಿನವರು ಅಟಲ್ ಪಿಂಚಣಿ ಯೋಜನೆಯಡಿ ಸೇರಬಹುದು. ಆದ್ದರಿಂದ 18 ವರ್ಷ ಮೇಲ್ಪಟ್ಟ ಯುವಕರು ಮತ್ತು ವಿದ್ಯಾರ್ಥಿಗಳೂ ಸಹ ಈ ಯೋಜನೆಗೆ ಸೇರಬಹುದು. ತಮ್ಮ ಭವಿಷ್ಯದ ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಮಾಡಬಹುದು. ಆದರೆ, 40 ವರ್ಷ ವಯಸ್ಸಿನ ನಂತರ ಈ ಯೋಜನೆಗೆ ಸೇರಲು ಸಾಧ್ಯವಿಲ್ಲ. ಅಲ್ಲದೇ, ಯಾವುದೇ ಸರ್ಕಾರಿ ಪ್ರಾಯೋಜಿತ ಸಾಮಾಜಿಕ ಭದ್ರತಾ ಯೋಜನೆಗಳನ್ನು ಹೊಂದಿರಬಾರದು ಮತ್ತು ತೆರಿಗೆ ಪಾವತಿದಾರರಾಗಿರಬಾರದು.
ಈ ಯೋಜನೆ ಸೇರುವುದು ಹೇಗೆ?: ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿರುವವರು ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ ಪಿಂಚಣಿ ಯೋಜನೆಗೆ ಸೇರಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 CCD (1B) ಅಡಿಯಲ್ಲಿ ಈ ಯೋಜನೆಗೆ ಸೇರಿದವರು 50,000 ರೂ. ತೆರಿಗೆ ವಿನಾಯಿತಿ ಪಡೆಯಬಹುದು.
ಈಗ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯುವುದು ಹೇಗೆ?: ಅಟಲ್ ಪಿಂಚಣಿ ಯೋಜನೆಯಡಿ ಸೇರಲು ಗರಿಷ್ಠ ವಯಸ್ಸು 40 ವರ್ಷ. ಉದಾಹರಣೆಗೆ, ನೀವು ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಲು ನಿರೀಕ್ಷಿಸುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ಈಗ 25 ವರ್ಷ ವಯಸ್ಸಾಗಿದೆ ಎಂದು ಭಾವಿಸಿದರೆ, ನೀವು ನಿವೃತ್ತರಾಗಲು ಇನ್ನೂ 35 ವರ್ಷಗಳು ಇರುತ್ತವೆ. ನಿವೃತ್ತಿ ವಯಸ್ಸಿನವರೆಗೆ (60 ವರ್ಷ) ತಿಂಗಳಿಗೆ 376 ರೂಪಾಯಿ ಹೂಡಿಕೆ ಮಾಡಬೇಕು. ಅಂದರೆ, ದಿನಕ್ಕೆ ಕೇವಲ 13 ರೂಪಾಯಿ ಆಗಲಿದೆ. ಅದೇ ರೀತಿ ನೀವು 40 ವರ್ಷ ವಯಸ್ಸಿನವರಾಗಿದ್ದರೆ, ನೀವು 1,454 ರೂ. ಹೂಡಿಕೆ ಮಾಡಬೇಕು. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಈ ಯೋಜನೆಯಡಿ ಸೇರುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.
ಅಟಲ್ ಪಿಂಚಣಿ ಯೋಜನೆ ಕೊಡುಗೆ ಚಾರ್ಟ್ ಪ್ರಕಾರ, ನೀವು 18ನೇ ವಯಸ್ಸಿನಿಂದಲೇ ಅಟಲ್ ಪಿಂಚಣಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ನೀವು ಪ್ರತಿ ತಿಂಗಳು ಕನಿಷ್ಠ 210 ರೂಪಾಯಿ ಕಟ್ಟಬೇಕು. ಅದೇ ರೀತಿ 25 ವರ್ಷಕ್ಕೆ ಸ್ವಲ್ಪ ತಡವಾಗಿ ಆರಂಭಿಸಿದರೆ ತಿಂಗಳಿಗೆ 376 ರೂ. ಹೂಡಿಕೆ ಮಾಡಬೇಕಾಗುತ್ತದೆ. 30 ವರ್ಷ ವಯಸ್ಸಿನವರಾದರೆ, ತಿಂಗಳಿಗೆ 577 ರೂ, ಹಾಗೂ 35 ವರ್ಷ ಮೇಲ್ಪಟ್ಟಿದ್ದರೆ, ತಿಂಗಳಿಗೆ 902 ರೂ. ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಮಾಸಿಕ ಹೂಡಿಕೆ ಮಾಡಬೇಕು. ಇದರೊಂದಿಗೆ 60 ವರ್ಷ ತುಂಬಿದ ನಂತರ ತಿಂಗಳಿಗೆ ಗರಿಷ್ಠ 5 ಸಾವಿರ ರೂ. ಪಿಂಚಣಿ ಪಡೆಯಬಹುದು.
ದಂಪತಿಗೂ ಅವಕಾಶ: ಗಂಡ ಮತ್ತು ಹೆಂಡತಿ ಇಬ್ಬರೂ ಅಟಲ್ ಪಿಂಚಣಿ ಯೋಜನೆಯಡಿ ಸೇರಬಹುದು. ಹೀಗೆ ಮಾಡಿದರೆ ದಂಪತಿಗಳಿಬ್ಬರಿಗೂ ಸೇರಿ 10,000 ರೂ. ಪಿಂಚಣಿ ಸಿಗುತ್ತದೆ. ಇಬ್ಬರಲ್ಲಿ ನಿಧನರಾದ ಬದುಕುಳಿದವರಿಗೆ ಆಯಾ ಪಿಂಚಣಿ ನೀಡಲಾಗುತ್ತದೆ. ಇಬ್ಬರೂ ನಿಧನವಾದರೆ, ಸಂಪೂರ್ಣ ಪರಿಹಾರವನ್ನು ನಾಮಿನಿಗೆ ಪಾವತಿಸಲಾಗುತ್ತದೆ. ಇದಕ್ಕೆ ನಿಮಗೆ ಬೇಕಾಗಿರುವುದು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ. ನೀವು ಯಾವುದೇ ಬ್ಯಾಂಕ್‌ನಲ್ಲಿ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ದಿನಕ್ಕೆ 18 ರೂಪಾಯಿ ಕಟ್ಟಿದ್ರೆ 3 ಲಕ್ಷದವರೆಗೆ ಲಾಭ, ಮಕ್ಕಳಿಗಾಗಿ ಸೂಪರ್ ಸ್ಕೀಮ್!