ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಗೆ ಜುಲೈ ತಿಂಗಳಲ್ಲಿ 19.94 ಲಕ್ಷ ನಿವ್ವಳ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇದು 2018 ರ ಏಪ್ರಿಲ್ನಲ್ಲಿ ವೇತನದಾರರ ಡೇಟಾ ಟ್ರ್ಯಾಕಿಂಗ್ ಪ್ರಾರಂಭಿಸಿದಾಗಿನಿಂದ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಂಕಿ - ಅಂಶಗಳು ಸೋಮವಾರ ತಿಳಿಸಿವೆ.
ಇಪಿಎಫ್ಒ ಗೆ ಜುಲೈನಲ್ಲಿ 10.52 ಲಕ್ಷ ಹೊಸ ಸದಸ್ಯರು ಸೇರ್ಪಡೆಯಾಗಿದ್ದು, ಇದು ಜೂನ್ಗೆ ಹೋಲಿಸಿದರೆ ಶೇಕಡಾ 2.66 ರಷ್ಟು ಹೆಚ್ಚಳವಾಗಿದೆ ಮತ್ತು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 2.43 ರಷ್ಟು ಹೆಚ್ಚಳವಾಗಿದೆ.
ಉದ್ಯೋಗಾವಕಾಶಗಳು ಹೆಚ್ಚಾಗುತ್ತಿರುವುದು, ಇಪಿಎಫ್ಒದಿಂದ ಉದ್ಯೋಗಿಗಳಿಗೆ ಲಭ್ಯವಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿದ ಜಾಗೃತಿ ಮತ್ತು ಇಪಿಎಫ್ಒನ ಯಶಸ್ವಿ ಔಟ್ ರೀಚ್ ಕಾರ್ಯಕ್ರಮಗಳು ಹೊಸ ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಇಪಿಎಫ್ಒ ವ್ಯವಸ್ಥೆಯಿಂದ ನಿರ್ಗಮಿಸಿದ್ದ ಸುಮಾರು 14.65 ಲಕ್ಷ ಸದಸ್ಯರು ಜುಲೈನಲ್ಲಿ ಮತ್ತೆ ಇಪಿಎಫ್ಒಗೆ ಬಂದಿದ್ದಾರೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡಾ 15.25 ರಷ್ಟು ಹೆಚ್ಚಳವಾಗಿದೆ. ಈ ಸದಸ್ಯರು ತಮ್ಮ ಭವಿಷ್ಯ ನಿಧಿಯಲ್ಲಿ ಸಂಗ್ರಹವಾದ ಮೊತ್ತ ಹಿಂತೆಗೆದುಕೊಳ್ಳುವ ಬದಲು ವರ್ಗಾಯಿಸಲು ಆಯ್ಕೆ ಮಾಡಿಕೊಂಡಿದ್ದಾರೆ.
ಜುಲೈನಲ್ಲಿ ನಿವ್ವಳ 8.77 ಲಕ್ಷ ಸದಸ್ಯರ ಸೇರ್ಪಡೆಯೊಂದಿಗೆ, 18 - 25 ವಯೋಮಾನದವರಲ್ಲಿ ಹೆಚ್ಚಿನ ಬೆಳವಣಿಗೆ ಕಂಡು ಬಂದಿದೆ. ಈ ವಯಸ್ಸಿನವರು ತಿಂಗಳಲ್ಲಿ ಸೇರ್ಪಡೆಯಾದ ಎಲ್ಲ ಹೊಸ ಸದಸ್ಯರ ಪೈಕಿ ಶೇಕಡಾ 59.41 ರಷ್ಟನ್ನು ಪ್ರತಿನಿಧಿಸುತ್ತಾರೆ.
ಜುಲೈನಲ್ಲಿ ಸುಮಾರು 3.05 ಲಕ್ಷ ಹೊಸ ಮಹಿಳಾ ಸದಸ್ಯರು ಇಪಿಎಫ್ಒಗೆ ಸೇರ್ಪಡೆಯಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 10.94 ರಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ ನಿವ್ವಳ 4.41 ಲಕ್ಷ ಮಹಿಳಾ ಸದಸ್ಯರು ಇಪಿಎಫ್ಒಗೆ ಸೇರ್ಪಡೆಯಾಗಿದ್ದಾರೆ. ಇದು ವೇತನದಾರರ ಟ್ರ್ಯಾಕಿಂಗ್ ಪ್ರಾರಂಭವಾದಾಗಿನಿಂದ ಮಾಸಿಕವಾಗಿ ಅತ್ಯಧಿಕ ಮಹಿಳಾ ಸದಸ್ಯರ ಸೇರ್ಪಡೆಯಾಗಿದೆ. ಇದು ಜುಲೈ 2023 ಕ್ಕೆ ಹೋಲಿಸಿದರೆ ಶೇಕಡಾ 14.41 ರಷ್ಟು ಹೆಚ್ಚಳವಾಗಿದೆ.
ಸಚಿವಾಲಯದ ಪ್ರಕಾರ ಒಟ್ಟು ನಿವ್ವಳ ಸದಸ್ಯರ ಸೇರ್ಪಡೆಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ ಮತ್ತು ಗುಜರಾತ್ ಗಳ ಪಾಲು ಶೇಕಡಾ 59.27 ರಷ್ಟಿದೆ. ಒಟ್ಟಾರೆಯಾಗಿ ಈ ರಾಜ್ಯಗಳಲ್ಲಿ ಇಪಿಎಫ್ಒಗೆ ಸೇರ್ಪಡೆಯಾದ ಸದಸ್ಯರ ಸಂಖ್ಯೆ 11.82 ಲಕ್ಷದಷ್ಟಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಮಹಾರಾಷ್ಟ್ರವು ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರವು ಒಟ್ಟು ಹೊಸ ಸದಸ್ಯರಲ್ಲಿ ಶೇಕಡಾ 20.21 ರಷ್ಟು ಕೊಡುಗೆ ನೀಡಿದೆ ಎಂದು ಅಂಕಿ ಅಂಶಗಳು ತೋರಿಸಿವೆ.
ಇದನ್ನೂ ಓದಿ : ಜೂನ್ ತ್ರೈಮಾಸಿಕದಲ್ಲಿ ಚಿಲ್ಲರೆ ಸಾಲಗಳ ಬೆಳವಣಿಗೆ ಕುಂಠಿತ: ಸಿಬಿಲ್ ವರದಿ, ಕುಸಿತಕ್ಕೆ ಕಾರಣವೇನು ? - RETAIL CREDIT GROWTH