ನವದೆಹಲಿ: ಪ್ರಸಕ್ತ ಹಬ್ಬದ ಋತುವಿನಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಜೋರಾಗಿದೆ. 2024ರ ಅಕ್ಟೋಬರ್ನಲ್ಲಿ ಇವುಗಳ ಮಾರಾಟ ಶೇ 85ರಷ್ಟು ಹೆಚ್ಚಾಗಿದ್ದು, 1,39,031 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಈ ಸಂಖ್ಯೆ 75,164 ಯುನಿಟ್ ಆಗಿತ್ತು. ಇವಿ ವಾಹನಗಳ ಮಾರಾಟ ಹೆಚ್ಚುತ್ತಿರುವುದು ಜನ ಕ್ರಮೇಣವಾಗಿ ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿರುವುದರ ಸೂಚನೆಯಾಗಿದೆ.
2024 ರ ಕ್ಯಾಲೆಂಡರ್ ವರ್ಷದ ಮೊದಲ 10 ತಿಂಗಳಲ್ಲಿ ಒಟ್ಟು 9,54,164 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿರುವುದು ಗಮನಾರ್ಹ. ಇದು ವಾರ್ಷಿಕ ಆಧಾರದ ಮೇಲೆ ಶೇಕಡಾ 38 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಸಂಖ್ಯೆ 6,92,363 ಆಗಿತ್ತು.
ಸೇವೆ ಮತ್ತು ಉತ್ಪನ್ನದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗ್ರಾಹಕರಿಂದ ಹಲವಾರು ದೂರುಗಳನ್ನು ಎದುರಿಸುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿ ಅಕ್ಟೋಬರ್ 2024 ರಲ್ಲಿ 41,605 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಆಗಸ್ಟ್ ನಲ್ಲಿ 27,615 ಮತ್ತು ಸೆಪ್ಟೆಂಬರ್ ನಲ್ಲಿ 24,716 ವಾಹನಗಳನ್ನು ಮಾರಾಟ ಮಾಡಿತ್ತು.
2024ನೇ ವರ್ಷವು ಓಲಾ ಎಲೆಕ್ಟ್ರಿಕ್ಗೆ ತೀರಾ ಏರಿಳಿತದ ವರ್ಷವಾಗಿದೆ. ಈ ವರ್ಷದ ಜನವರಿಯಲ್ಲಿ ಕಂಪನಿಯು 32,424 ವಾಹನಗಳನ್ನು ಮಾರಾಟ ಮಾಡಿತ್ತು. ಮಾರ್ಚ್ನಲ್ಲಿ ಮಾರಾಟವು ಸಾರ್ವಕಾಲಿಕ ಗರಿಷ್ಠ 53,640 ಯುನಿಟ್ಗಳಿಗೆ ಏರಿಕೆಯಾಗಿತ್ತು. ಈ ಅವಧಿಯಲ್ಲಿ, ಕಂಪನಿಯ ಮಾರುಕಟ್ಟೆ ಪಾಲು ಶೇಕಡಾ 38 ಕ್ಕೆ ತಲುಪಿತ್ತು, ಆದರೆ ಇದರ ನಂತರ ಓಲಾ ಎಲೆಕ್ಟ್ರಿಕ್ನ ಮಾರಾಟ ಸಂಖ್ಯೆ ಕುಸಿಯುತ್ತಲೇ ಇದ್ದು, ಸೆಪ್ಟೆಂಬರ್ನಲ್ಲಿ ಮಾರುಕಟ್ಟೆ ಪಾಲು ಶೇಕಡಾ 27 ಕ್ಕೆ ಇಳಿದಿತ್ತು.
ಇದಲ್ಲದೆ, ಇತರ ಇವಿ ದ್ವಿಚಕ್ರ ವಾಹನ ಕಂಪನಿಗಳ ಮಾರಾಟದಲ್ಲೂ ಹೆಚ್ಚಳ ಕಂಡುಬಂದಿದೆ. ಟಿವಿಎಸ್ ಮೋಟಾರ್ 29,890 ಇವಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇದು ವಾರ್ಷಿಕ ಆಧಾರದ ಮೇಲೆ ಶೇಕಡಾ 81 ರಷ್ಟು ಹೆಚ್ಚಳವಾಗಿದೆ. ಅಕ್ಟೋಬರ್ 2023 ರಲ್ಲಿ, ಈ ಪ್ರಮಾಣ 16,507 ಯುನಿಟ್ ಆಗಿತ್ತು. ಈ ಅವಧಿಯಲ್ಲಿ, ಕಂಪನಿಯ ಮಾರುಕಟ್ಟೆ ಪಾಲು ಶೇಕಡಾ 21 ರಷ್ಟಿತ್ತು.
ಸೆಪ್ಟೆಂಬರ್ನಲ್ಲಿ, ಬಜಾಜ್ ಎರಡನೇ ಸ್ಥಾನದಲ್ಲಿ ಹಾಗೂ ಟಿವಿಎಸ್ ಮೋಟಾರ್ ಮೂರನೇ ಸ್ಥಾನದಲ್ಲಿದ್ದವು. ಆದರೆ ಅಕ್ಟೋಬರ್ನಲ್ಲಿ ಟಿವಿಎಸ್ ಮೋಟಾರ್ ಮತ್ತೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಅಕ್ಟೋಬರ್ ನಲ್ಲಿ ಬಜಾಜ್ ಮೂರನೇ ಸ್ಥಾನದಲ್ಲಿತ್ತು.
2023 ರ ಕ್ಯಾಲೆಂಡರ್ ವರ್ಷದಲ್ಲಿ, ಟಿವಿಎಸ್ 1,66,581 ಐಕ್ಯೂಬ್ ಮಾಡೆಲ್ನ ಇವಿಗಳನ್ನು ಮಾರಾಟ ಮಾಡಿದೆ. ಇದು ಬಜಾಜ್ ಆಟೋದ 71,940 ಚೇತಕ್ ಮಾಡೆಲ್ಗಿಂತ 94,641 ಯುನಿಟ್ಗಳಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : ದೇಶದಲ್ಲಿ ಹೆಚ್ಚುತ್ತಿದೆ ಡಿಜಿಟಲ್ ವಹಿವಾಟು; ಅಕ್ಟೋಬರ್ನಲ್ಲಿ ಹೊಸ ದಾಖಲೆ ಬರೆದ ಯುಪಿಐ!