ಮುಂಬೈ (ಮಹಾರಾಷ್ಟ್ರ): ನಮ್ಮ ಪಕ್ಷದ ಹೊಸ ಗೀತೆಯಿಂದ 'ಜೈ ಭವಾನಿ' ಮತ್ತು 'ಹಿಂದೂ' ಪದಗಳನ್ನು ತೆಗೆದುಹಾಕುವಂತೆ ಕೇಂದ್ರ ಚುನಾವಣಾ ಆಯೋಗದಿಂದ (ಇಸಿಐ) ನಾವು ನೋಟಿಸ್ ಸ್ವೀಕರಿದ್ದೇವೆ. ಆದರೆ, ನಾವು ಸೂಚನೆಯ್ನು ಪಾಲಿಸುವುದಿಲ್ಲ ಎಂದು ಮಹಾರಾಷ್ಟ್ರದ ಶಿವಸೇನೆ (ಯುಬಿಟಿ) ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಮುಂಬೈನಲ್ಲಿ ಭಾನುವಾರ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಷದ ಹೊಸ ಚುನಾವಣಾ ಚಿಹ್ನೆಯಾದ 'ಮಶಾಲ್' (ಉರಿಯುವ ಜ್ಯೋತಿ)ಅನ್ನು ಜನಪ್ರಿಯಗೊಳಿಸಲು ಗೀತೆಯನ್ನು ರಚಿಸಲಾಗಿದೆ. ಆದರೆ, ಇದಲ್ಲಿರುವ 'ಹಿಂದೂ' ಮತ್ತು 'ಜೈ ಭವಾನಿ' ಪದಗಳನ್ನು ತೆಗೆದುಹಾಕಲು ಚುನಾವಣೆ ಆಯೋಗ ಸೂಚಿಸಿದೆ. ನಮ್ಮ ಗೀತೆಯಿಂದ 'ಜೈ ಭವಾನಿ' ಪದವನ್ನು ತೆಗೆದುಹಾಕುವಂತೆ ಹೇಳುವುದು ಮಹಾರಾಷ್ಟ್ರಕ್ಕೆ ಮಾಡಿದ ಅವಮಾನವಾಗಿದೆ ಎಂದು ಕಿಡಿಕಾರಿದರು.
ಛತ್ರಪತಿ ಶಿವಾಜಿ ಮಹಾರಾಜರು ತುಳಜಾ ಭವಾನಿ ದೇವಿಯ ಆಶೀರ್ವಾದದೊಂದಿಗೆ ಹಿಂದವಿ ಸ್ವರಾಜ್ ಸ್ಥಾಪಿಸಿದ್ದರು. ನಾವು ದೇವಿ ಅಥವಾ ಹಿಂದೂ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿಲ್ಲ. ಆದರೆ, 'ಜೈ ಭವಾನಿ' ಪದವನ್ನು ತೆಗೆದುಹಾಕುವಂತೆ ಹೇಳುವುದು ಅವಮಾನವಾಗಿದೆ. ನಾವು ಇದನ್ನು ಸಹಿಸುವುದಿಲ್ಲ ಎಂದು ಠಾಕ್ರೆ ಹೇಳಿದರು.
ಇದೇ ವೇಳೆ, ನಮ್ಮ ಸಾರ್ವಜನಿಕ ಸಭೆಗಳಲ್ಲಿ 'ಜೈ ಭವಾನಿ' ಮತ್ತು 'ಜೈ ಶಿವಾಜಿ' ಎಂದು ಹೇಳುವ ರೂಢಿಯನ್ನು ಮುಂದುವರೆಸುವುದಾಗಿ ಉದ್ಧವ್ ಸ್ಪಪ್ಟಪಡಿಸಿದರು. ಈ ವಿಷಯವಾಗಿ ಚುನಾವಣಾ ಆಯೋಗವು ನಮ್ಮ ವಿರುದ್ಧ ಕ್ರಮ ಕೈಗೊಂಡರೆ, ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 'ಜೈ ಬಜರಂಗ ಬಲಿ' ಅಂತಾ ಹೇಳಿ ಇವಿಎಂ ಬಟನ್ ಒತ್ತಿ ಎಂದು ಹೇಳಿದಾಗ ಚುನಾವಣಾ ಆಯೋಗ ಏನು ಮಾಡಿತ್ತು ಎಂಬುದನ್ನು ನಮಗೆ ತಿಳಿಸಬೇಕಾಗುತ್ತದೆ ಎಂದು ಉದ್ಧವ್ ಸವಾಲು ಹಾಕಿದರು.
ಮುಂದುವರೆದು, ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನವನ್ನು ಉಚಿತವಾಗಿ ಪಡೆಯಲು ಬಿಜೆಪಿಗೆ ಮತ ಹಾಕುವಂತೆ ಅಮಿತ್ ಶಾ ಜನರಿಗೆ ಕರೆ ನೀಡಿದ್ದರು. ಅಲ್ಲದೇ, ಕಾನೂನುಗಳನ್ನು ಏನಾದರೂ ಬದಲಾಯಿಸಲಾಗಿದೆಯೇ ಮತ್ತು ಈಗ ಧರ್ಮದ ಹೆಸರಿನಲ್ಲಿ ಮತ ಕೇಳುವುದು ಸರಿಯೇ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ನಮ್ಮ ಪತ್ರಕ್ಕೆ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ, ಕಾನೂನನ್ನು ಬದಲಾಯಿಸಿದ್ದರೆ ನಮ್ಮ ಚುನಾವಣಾ ಸಭೆಗಳಲ್ಲಿ ನಾವು 'ಹರ್ ಹರ್ ಮಹಾದೇವ್' ಎಂದು ಹೇಳುತ್ತೇವೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದೇವೆ ಅಂತಾ ಉದ್ಧವ್ ಠಾಕ್ರೆ ಮಾಹಿತಿ ನೀಡಿದರು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಹಿಂದುತ್ವದ ಪರ ಪ್ರಚಾರ ಮಾಡಿದ್ದಕ್ಕಾಗಿ ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಅವರನ್ನು ಆರು ವರ್ಷಗಳ ಕಾಲ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿತ್ತು ಎಂದು ಅವರು ನೆನಪು ಮಾಡಿದರು. ಜೊತೆಗೆ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಧರ್ಮವನ್ನು ಪ್ರಚೋದಿಸುವ ಭಾಷಣಗಳನ್ನು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ 'ಭ್ರಷ್ಟಪದ್ಧತಿ' (corrupt practice) ಅಲ್ಲವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಚುನಾವಣೆ ಆಯೋಗಕ್ಕೆ ನಮ್ಮ ಪ್ರಶ್ನೆ ಕೇಳಿದೆ ಎಂದು ವಿವರಿಸಿದರು.