ಆಗ್ರಾ, ಉತ್ತರಪ್ರದೇಶ: ಇಲ್ಲಿನ ಖಂಡೌಲಿ ಪ್ರದೇಶದ ಗ್ರಾಮವೊಂದರಲ್ಲಿ ಕೆಲವರು ಮಹಿಳೆಯೊಬ್ಬರಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮತಾಂತರಕ್ಕೆ ಮಹಿಳೆ ನಿರಾಕರಿಸಿದಾಗ, ಅವರ ಜಮೀನನ್ನು ಸ್ವಾಧೀನಪಡಿಸಿಕೊಂಡು ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹೇಳಿದಂತೆ ಕೇಳದ್ದಕ್ಕೆ ಮನೆ ಮೇಲೂ ದಾಳಿ ನಡೆಸಿ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಐವರು ಪರಿಚಿತ ಹಾಗೂ 20 ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ದೂರಿನಲ್ಲಿ ಮಹಿಳೆ ಮಾಡಿರುವ ಆರೋಪ ಏನು?: ಗ್ರಾಮದಲ್ಲಿ ತಮ್ಮದೊಂದೇ ಮುಸ್ಲಿಂ ಕುಟುಂಬ ಇದ್ದು, ಗ್ರಾಮದ ಚಂದ್ರಭಾನ್ ಎಂಬಾತ ಎರಡು ತಿಂಗಳ ಹಿಂದೆ ತನ್ನ 15-20 ಬೆಂಬಲಿಗರೊಂದಿಗೆ ಮನೆಗೆ ಬಂದಿದ್ದ. ಹಿಂದೂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದ್ದರು. ನಾನು ಇದಕ್ಕೆ ನಿರಾಕರಿಸಿದೆ. ಚಂದ್ರಭಾನ್, ಆತನ ತಂದೆ ಪ್ರತಾಪ್ ಸಿಂಗ್, ಜಗವೀರ್ ಸಿಂಗ್, ರಾಹುಲ್ ಮತ್ತು ಸಚಿನ್ ಅವರ ಮಾತಿಗೆ ಕಿವಿಗೊಡದಿದ್ದಾಗ ನನ್ನ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ತಾನು ಮತಾಂತರಕ್ಕೆ ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದರಿಂದ ಕೆರಳಿದ ಆರೋಪಿ ಏಪ್ರಿಲ್ 7 ರಂದು ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ನಡೆದ ಗದ್ದಲದಿಂದ ಮನೆಯವರು ಎಚ್ಚರಗೊಂಡು, ಅವನನ್ನು ಸುತ್ತುವರೆದಿದ್ದರಿಂದ ಆರೋಪಿ ಚಂದ್ರಭಾನ್ ಓಡಿಹೋಗಿದ್ದ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಚಂದ್ರಭಾನ್ ಸಿಂಗ್ ಸೇರಿದಂತೆ 15-20 ಮಂದಿ ತನ್ನ ಮನೆ ಮೇಲೆ ದಾಳಿ ನಡೆಸಿ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ನಾವು ಮತಾಂತರಕ್ಕೆ ನಿರಾಕರಿಸಿದ್ದರಿಂದ ನಮ್ಮ ಸಹೋದರರರಿಗೆ ಹೊಡೆಯಲಾಗಿದೆ. ಇದರಿಂದ ನಮ್ಮ ಕುಟುಂಬ ಆತಂಕದಲ್ಲಿದೆ ಎಂದು ನೊಂದ ಮಹಿಳೆ ಪೊಲೀಸರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಈ ಪ್ರಕರಣದಲ್ಲಿ ಮಹಿಳೆಯ ದೂರಿನ ಮೇರೆಗೆ ಆರೋಪಿಗಳಾದ ಚಂದ್ರಭಾನ್, ಜಗವೀರ್, ಪ್ರತಾಪ್, ರಾಹುಲ್ ಮತ್ತು ಸಚಿನ್ ಹಾಗೂ 20 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಖಂಡೌಲಿ ಠಾಣೆ ಪ್ರಭಾರಿ ರಾಜೀವ್ ಸೋಲಂಕಿ ತಿಳಿಸಿದ್ದಾರೆ.
ಇದನ್ನು ಓದಿ: ಧಾರವಾಡದ ಅಪಾರ್ಟ್ಮೆಂಟ್ನಲ್ಲಿ ₹17 ಕೋಟಿ 98 ಲಕ್ಷ ರೂ ಪತ್ತೆ: ಮುಂದುವರಿದ ತನಿಖೆ - Cash Found