ಚೆನ್ನೈ (ತಮಿಳುನಾಡು): ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ನುಗ್ಗುತ್ತಿವೆ. ಜನರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ. ಓರ್ವ ವೃದ್ಧೆ, ದಂಪತಿ ಸೇರಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಯ ಮೇಲೆ ದಾಳಿ ಮಾಡಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇಲ್ಲಿನ ಮಧುಕ್ಕರೈ ಅರಣ್ಯ ಪ್ರದೇಶದಲ್ಲಿ ಸದ್ಯ 30ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಿನಲ್ಲಿ ಭೀಕರ ಬರಗಾಲ ಇರುವುದರಿಂದ ರಾತ್ರಿ ವೇಳೆ ಕಾಡಾನೆಗಳು ಅರಣ್ಯದಿಂದ ಹೊರಬರುತ್ತಿವೆ. ಆಹಾರ ಮತ್ತು ನೀರು ಅರಸಿ ಸಮೀಪದ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಈ ಭಾಗದಲ್ಲಿ ಬಾಳೆ, ತೆಂಗು ಮುಂತಾದ ಬೆಳೆಗಳನ್ನು ನಾಶ ಮಾಡಿ, ನೀರಿನ ಪೈಪ್‌ಗಳನ್ನೂ ಕಾಡಾನೆಗಳು ಹಾಳು ಮಾಡುತ್ತಿವೆ.
ಇದರ ನಡುವೆ ಬುಧವಾರ ಕರಡಿಮಡೈ ಗ್ರಾಮಕ್ಕೆ ಗಂಡಾನೆಯೊಂದು ನುಗ್ಗಿದೆ. ಇಲ್ಲಿನ ಬ್ಲೇಕ್ ಮಾರಿಯಮ್ಮನ ದೇವಸ್ಥಾನದ ಪ್ರದೇಶದಲ್ಲಿರುವ ವಿಷ್ಣು ಎಂಬುವವರ ತೋಟಕ್ಕೆ ಪ್ರವೇಶಿಸಿ, ರಾತ್ರಿ ಹೊತ್ತು ಮಲಗಿದ್ದ 70 ವರ್ಷದ ನಾಗಮ್ಮಾಳ್ ಎಂಬ ವೃದ್ಧೆ ಮೇಲೆ ದಾಳಿ ಮಾಡಿದೆ. ಮನೆಯ ಹೊರಗೆ ನಾಗಮ್ಮಾಳ್ ಮಲಗಿದ್ದರು. ಆನೆಯ ಶಬ್ದ ಕೇಳಿ ಎದ್ದಿದ್ದಾರೆ. ಈ ವೇಳೆ, ವೃದ್ಧೆಯತ್ತ ಬಂದ ಏಕಾಏಕಿ ಕಾಡಾನೆ ದಾಳಿ ಮಾಡಿದೆ.
ಇದರಿಂದ ಕೆಳಗೆ ಬಿದ್ದ ವೃದ್ಧೆ ತಲೆಗೆ ಪೆಟ್ಟಾಗಿದೆ. ಆದರೆ, ಅದೃಷ್ಟವಶಾತ್ ಗಾಯದಿಂದ ಪಾರಾಗಿದ್ದಾರೆ. ಇದಾದ ಬಳಿಕ ವೃದ್ಧೆಯ ಗದ್ದಲದಿಂದ ಅಲ್ಲಿಂದ ತೆರಳಿದ ಆನೆ ಸಮೀಪದ ಇನ್ನೊಂದು ಮನೆಗೂ ಲಗ್ಗೆ ಇಟ್ಟಿದೆ. ಈ ಮನೆಯ ಹೊರಗಿಟ್ಟಿದ್ದ ಅಕ್ಕಿ ಚೀಲವನ್ನು ತೆಗೆದುಕೊಂಡು ಹೋಗಲು ಯತ್ನಿಸಿದೆ. ಆಗ ಮನೆಯೊಳಗೆ ಮಲಗಿದ್ದ ಧನಲಕ್ಷ್ಮೀ ಎಂಬುವರು ದಂಪತಿ ಹೊರಗೆ ಬಂದಿದ್ದಾರೆ. ಈ ವೇಳೆ, ದಂಪತಿ ಮೇಲೆಯೂ ಆನೆ ದಾಳಿ ಮಾಡಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಇದಾದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಆನೆಯನ್ನು ಮತ್ತೆ ಕಾಡಿಗೆ ಓಡಿಸಿದ್ದಾರೆ. ಮತ್ತೊಂದೆಡೆ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೊಯಮತ್ತೂರಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕಾಡಿನಿಂದ ಕೆಫೆಯ ಆವರಣಕ್ಕೆ ನುಗ್ಗಿದ ಕಾಡಾನೆ: ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಜನರು
ಇತ್ತೀಚೆಗೆ ಕರ್ನಾಟಕದ ಹಾಸನ ಜಿಲ್ಲೆಯಲ್ಲೂ ಕಾಡಾನೆಯೊಂದು ನುಗ್ಗಿದ ಘಟನೆ ನಡೆದಿತ್ತು. ಬೇಲೂರು ತಾಲೂಕಿನ ಚೀಕನಹಳ್ಳಿ- ಕೈಮರ ರಸ್ತೆಯಲ್ಲಿ ಸಿಕ್ಕ-ಸಿಕ್ಕವರನ್ನೆಲ್ಲಾ ಆನೆ ಅಟ್ಟಾಡಿಸಿತ್ತು. ಒಂಟಿ ಸಲಗವನ್ನು ನೋಡಿದ ಕೆಲವು ಯುವಕರು ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಕಾಡಾನೆ ಯುವಕರನ್ನು ಅಟ್ಟಾಡಿಸಿತ್ತು. ಇದರ ದೃಶ್ಯಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.