ನವದೆಹಲಿ: ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ. ಇದು ಸಂವಿಧಾನದ ಮಾಹಿತಿ ಮತ್ತು ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ. ಹೀಗಾಗಿ ಈ ಯೋಜನೆಯನ್ನು ತಕ್ಷಣದಿಂದಲೇ ನಿಲ್ಲಿಸಿ ಬಿಡಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿ ಸರ್ವಾನುಮತದ ತೀರ್ಪು ನೀಡಿದೆ. ಜನವರಿ 2, 2018 ರಂದು ಸರ್ಕಾರವು ಅಧಿಸೂಚನೆ ಹೊರಡಿಸಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಭಾರತದ ಯಾವುದೇ ನಾಗರಿಕರು ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಕಾನೂನು ಬದ್ಧವಾಗಿ ಸ್ಥಾಪಿತವಾದ ಸಂಸ್ಥೆ, ಘಟಕ ಅಥವಾ ವ್ಯಕ್ತಿ ಅಥವಾ ಇತರ ವ್ಯಕ್ತಿಗಳೊಂದಿಗೆ ಸೇರಿ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತ್ತು.
ಸರ್ಕಾರದ ಈ ಯೋಜನೆಯನ್ನು ವಿರೋಧಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದೀಗ ಈ ಬಗ್ಗೆ ಅಂತಿಮ ತೀರ್ಪು ಹೊರ ಬಿದ್ದಿದ್ದು, ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಮುಖಾಂಶಗಳು ಹೀಗಿವೆ:
1. ಚುನಾವಣೆ ಬಾಂಡ್‌ಗಳ ಯೋಜನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆ ಬಳಿಕ ಇಂದು ತೀರ್ಪು ಪ್ರಕಟಿಸಿದ ಸಿಜೆಐ, ಈ ಯೋಜನೆಯು ಸಂವಿಧಾನದ 19 (1) (ಎ) ಪರಿಚ್ಛೇದದ ಅಡಿ ಬರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದರು. ಖಾಸಗಿತನದ ಮೂಲಭೂತ ಹಕ್ಕು ನಾಗರಿಕರ ರಾಜಕೀಯ ಗೌಪ್ಯತೆ ಮತ್ತು ಸಂಬಂಧದ ಹಕ್ಕುಗಳನ್ನ ಇದು ಉಲ್ಲಂಘಿಸುತ್ತಿದೆ ಎಂದು ಮಹತ್ವದ ತೀರ್ಪು ನೀಡಿದ್ದಾರೆ.
2. ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್‌ಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ. ಅಷ್ಟೇ ಅಲ್ಲ ಮಾರ್ಚ್ 6ರ ಒಳಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಗಳ ವಿವರಗಳನ್ನು ಮತ್ತು ಕೊಡುಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಒದಗಿಸಬೇಕು ಎಂದು ಸುಪ್ರೀಂ ಹೇಳಿದೆ.
3. ವ್ಯಕ್ತಿಗಳು ನೀಡಿರುವ ದೇಣಿಗೆ ಮತ್ತು ಕಂಪನಿಗಳ ಕೊಡುಗೆಗಳು ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳಿಗಿಂತ ರಾಜಕೀಯ ಪ್ರಕ್ರಿಯೆಯ ಮೇಲೆ ಗಂಭೀರ ಪ್ರಭಾವ ಹಾಗೂ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಸುಪ್ರೀಂ ಗಮನಿಸಿದೆ. ಇನ್ನು ಕಂಪನಿಗಳ ಕಾಯಿದೆಗೆ ತಿದ್ದುಪಡಿ ಮಾಡಿರುವುದು ಕೂಡಾ ಅಸಂವಿಧಾನಿಕ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
4. ಈ ತಿದ್ದುಪಡಿಯು ನಾಗರಿಕರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ. ಸಂಭವನೀಯ ಕ್ವಿಡ್ ಪ್ರೊ ಕೋ ಮತ್ತು ಕಂಪನಿಗಳ ಕಾಯಿದೆಯ ಸೆಕ್ಷನ್ 182 ರ ತಿದ್ದುಪಡಿಯು ಅಸಾಂವಿಧಾನಿಕವಾಗಿದೆ ಎಂಬ ವಿಚಾರವನ್ನು ಕೋರ್ಟ್ ಕಂಡುಕೊಂಡಿದೆ.
5. ಚುನಾವಣಾ ಯೋಜನೆಯ ಕಲಂ 7(4)(1) ರಲ್ಲಿ ಅಳವಡಿಸಲಾಗಿರುವ ಕ್ರಮವು ಕನಿಷ್ಠ ನಿರ್ಬಂಧಿತ ಕ್ರಮವಾಗಿದೆ ಎಂಬ ವಿಚಾರವನ್ನು ವಿವರಿಸಲು ಹಾಗೂ ಅರ್ಥೈಸಿಕೊಳ್ಳಲು ಕೇಂದ್ರಕ್ಕೆ ಸಾಧ್ಯವಾಗಿಲ್ಲ.
6. ಆದಾಯ ತೆರಿಗೆ ಕಾಯಿದೆ ನಿಬಂಧನೆಗಳಿಗೆ ತಿದ್ದುಪಡಿಗಳು ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29C ಅಧಿಕಾರ ವ್ಯಾಪ್ತಿಯನ್ನ ಮೀರಿದೆ ಎಂದು ಸುಪ್ರೀಂ ಹೇಳಿದೆ.
7. ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವುದಕ್ಕಾಗಿ ಈ ಎರಡು ಪಕ್ಷಗಾರರ ನಡುವಣ ಒಪ್ಪಂದದಂತಿದೆ. ಸರಕು ಅಥವಾ ಸೇವೆಗಳ ಪರಸ್ಪರ ವಿನಿಮಯವಿರುವ ಎರಡು ಅಥವಾ ಹೆಚ್ಚಿನ ಪಕ್ಷಗಳ ನಡುವಿನ ಒಪ್ಪಂದಂತೆ ಈ ಯೋಜನೆ ಇದೆ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿದೆ.
8. ಮಾಹಿತಿ ಹಕ್ಕಿನ ಉಲ್ಲಂಘನೆಯನ್ನು ಕಪ್ಪುಹಣವನ್ನು ತಡೆಯುವ ಉದ್ದೇಶದಿಂದ ಸಮರ್ಥಿಸಲಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಹಣಕಾಸಿನ ಬೆಂಬಲವು ಕೊಡು - ಕೊಳ್ಳುವಿಕೆ ವ್ಯವಹಾರಗಳಿಗೂ ಕಾರಣವಾಗಬಹುದು. ಚುನಾವಣಾ ಬಾಂಡ್‌ಗಳ ಯೋಜನೆಯು ಕಪ್ಪು ಹಣವನ್ನು ತಡೆಯುವ ಏಕೈಕ ಉದ್ದೇಶದ ಯೋಜನೆಯಲ್ಲ, ಇದಕ್ಕೆ ಪರ್ಯಾಯ ಮಾರ್ಗಗಳಿವೆ.
9 ಚುನಾವಣಾ ಬಾಂಡ್‌ಗಳು ಒದಗಿಸುವ ಅನಾಮಧೇಯತೆಯು ಮಾಹಿತಿ ಹಕ್ಕು ಮತ್ತು ಆರ್ಟಿಕಲ್ 19(1)(ಎ) ಅನ್ನು ಉಲ್ಲಂಘಿಸುತ್ತದೆ ಎಂದು ಸುಪ್ರಿಂ ಸ್ಪಷ್ಟವಾಗಿ ಹೇಳಿದೆ.
10. ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮಾರ್ಚ್ 6 ರೊಳಗೆ ಈ ಯೋಜನೆಯ ಮೂಲಕ ಇಲ್ಲಿಯವರೆಗಿನ ಎಲ್ಲ ದೇಣಿಗೆಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಎಸ್‌ಬಿಐಗೆ ಸುಪ್ರೀಂ ಸೂಚಿಸಿದೆ. ಆಯೋಗವು ಮಾರ್ಚ್ 13 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತದೆ.
ಇದನ್ನು ಓದಿ: ಚುನಾವಣಾ ಬಾಂಡ್‌ಗಳು ಸಂವಿಧಾನ ಬಾಹಿರ, ತಕ್ಷಣವೇ ರದ್ದು ಮಾಡಿ: ಸುಪ್ರೀಂಕೋರ್ಟ್