ನವದೆಹಲಿ: ವೈದ್ಯಕೀಯ ಕಾಲೇಜುಗಳ ಪ್ರವೇಶದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಹೈಕೋರ್ಟ್ ನಡೆಸುತ್ತಿದ್ದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ವತಃ ತನಗೆ ವರ್ಗಾಯಿಸಿಕೊಂಡಿದೆ. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಇಬ್ಬರು ನ್ಯಾಯಮೂರ್ತಿಗಳ ಮಧ್ಯೆ ಉಂಟಾದ ಸಂಘರ್ಷದ ಕಾರಣದಿಂದ ಸುಪ್ರೀಂ ಕೋರ್ಟ್ ಈ ಕ್ರಮ ತೆಗೆದುಕೊಂಡಿದೆ.
ರಿಟ್ ಅರ್ಜಿ ಮತ್ತು ಲೆಟರ್ ಪೇಟೆಂಟ್ ಮೇಲ್ಮನವಿಯ ವಿಚಾರಣೆಯನ್ನು ಈ ನ್ಯಾಯಾಲಯಕ್ಕೆ ವರ್ಗಾಯಿಸಿಕೊಳ್ಳುತ್ತಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠ ಹೇಳಿದೆ.
ರಾಜ್ಯದಲ್ಲಿ ಎಂಬಿಬಿಎಸ್ ಪ್ರವೇಶಕ್ಕಾಗಿ ನಕಲಿ ಎಸ್ಸಿ/ಎಸ್ಟಿ ಪ್ರಮಾಣಪತ್ರಗಳನ್ನು ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಪ್ರಾರಂಭಿಸಿದ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದಲ್ಲಿ ವಾದ ಮಂಡಿಸಿ- ಈ ವಿಷಯದಲ್ಲಿ ಆಘಾತಕಾರಿ ಸಂಗತಿಗಳಿವೆ. ಅವುಗಳನ್ನು ಈ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಎಸ್ಸಿ/ಎಸ್ಟಿ ಸಂಘವನ್ನು ಪ್ರತಿನಿಧಿಸುವ ಹಿರಿಯ ವಕೀಲ ಮಣಿಂದರ್ ಸಿಂಗ್, 52 ಪ್ರಮಾಣಪತ್ರಗಳ ಪೈಕಿ 14 ನಕಲಿ ಎಂದು ಕಂಡುಬಂದಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದಾಖಲಾದ ಎಫ್ಐಆರ್ಗಳ ವಿಷಯದಲ್ಲಿ ನಡೆಸಲಾದ ತನಿಖಾ ಸ್ಥಿತಿಯನ್ನು ನಾವು ತಿಳಿಯಲು ಬಯಸುತ್ತೇವೆ ಎಂದು ಪಶ್ಚಿಮ ಬಂಗಾಳದ ವಕೀಲರಿಗೆ ತಿಳಿಸಿತು.
ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್, ಏಕ ನ್ಯಾಯಾಧೀಶರು ಈ ವಿಷಯಗಳ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಕೂಡ ಇದು ಮುಂದುವರಿಯಬಹುದು ಎಂದರು. "ನಾವು ಅಪಪ್ರಚಾರ ಮಾಡಬಾರದು. ಎಷ್ಟೇ ಆದರೂ ನಾವು ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಇಲ್ಲಿ ಹೇಳುವ ಯಾವುದೇ ವಿಷಯವು ಹೈಕೋರ್ಟ್ನ ಘನತೆಗೆ ಧಕ್ಕೆ ತರಬಾರದು" ಎಂದು ನ್ಯಾಯಪೀಠ ಹೇಳಿತು.
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಎ.ಎಂ.ಸಿಂಘ್ವಿ, ಈ ಹಿಂದೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ನ್ಯಾಯಾಲಯದಿಂದ ನೇಮಕಾತಿ ಹಗರಣ ಪ್ರಕರಣವನ್ನು ಹಿಂತೆಗೆದುಕೊಳ್ಳುವಾಗ ಸುಪ್ರೀಂ ಕೋರ್ಟ್ ನೀಡಿದ ಎಚ್ಚರಿಕೆಯು ಅಪೇಕ್ಷಿತ ಪರಿಣಾಮ ಬೀರಲಿಲ್ಲ ಎಂದು ವಾದಿಸಿದರು.
"ಹೈಕೋರ್ಟ್ನ ಅಧಿಕಾರವನ್ನು ನಾವು ಕಸಿದುಕೊಳ್ಳಬಾರದು. ಈ ವಿಷಯದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಉಸ್ತುವಾರಿ ವಹಿಸಿದ್ದಾರೆ" ಎಂದು ನ್ಯಾಯಪೀಠ ಹೇಳಿತು. ಈವರೆಗೆ 14 ಪ್ರಕರಣಗಳಲ್ಲಿ ರಾಜ್ಯ ಪೊಲೀಸರು 10 ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಿಬಲ್ ಹೇಳಿದರು. ವಾದ-ವಿವಾದ ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಎಲ್ಲಾ ಪಕ್ಷಗಳಿಗೆ ಮೂರು ವಾರಗಳಲ್ಲಿ ತಮ್ಮ ಮನವಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಜಾತಿ ಪ್ರಮಾಣಪತ್ರ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಹೈಕೋರ್ಟ್ನ ಏಕ ನ್ಯಾಯಾಧೀಶರು ಮತ್ತು ವಿಭಾಗೀಯ ಪೀಠದ ಮುಂದೆ ನಡೆಯುತ್ತಿರುವ ಎಲ್ಲಾ ವಿಚಾರಣೆಗಳಿಗೆ ಸುಪ್ರೀಂ ಕೋರ್ಟ್ ಶನಿವಾರ ತಡೆ ನೀಡಿತ್ತು. ಹಗರಣದ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶಿಸಿದ ಏಕಸದಸ್ಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಮತ್ತು ಮುಂದಿನ ವಿಚಾರಣೆಯನ್ನು ಸೋಮವಾರ ನಿಗದಿಪಡಿಸಿತ್ತು.
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ಏಕಸದಸ್ಯ ಪೀಠವು ವಿಭಾಗೀಯ ಪೀಠದ ಆದೇಶವನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು. ಪಶ್ಚಿಮ ಬಂಗಾಳದಲ್ಲಿ ಎಂಬಿಬಿಎಸ್ ಪ್ರವೇಶದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂಬ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ನಿರ್ದೇಶನವನ್ನು ವಿಸ್ತೃತ ನ್ಯಾಯಪೀಠ ತಡೆಹಿಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಇದನ್ನೂ ಓದಿ: ಇಸ್ರೇಲ್ಗೆ ತೆರಳಲು ಸಜ್ಜಾದ ಭಾರತೀಯ ಕಾರ್ಮಿಕರು; ತಿಂಗಳಿಗೆ ಇಷ್ಟೊಂದು ವೇತನ!