ವಯನಾಡ್ (ಕೇರಳ): ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತ ಚಲಾಯಿಸಲು ಬಂದ ಜನರ ನಡುವೆ ಭಾವನಾತ್ಮಕ ನಂಟು ಕಂಡುಬಂದಿತು. ಕೆಲ ದಿನಗಳ ಹಿಂದೆ ಪ್ರಕೃತಿ ವಿಕೋಪದಲ್ಲಿ ಸಿಲುಕಿ ಬದುಕುಳಿದವರು ಮತ್ತೆ ಭೇಟಿಯಾದಾಗ ಕಣ್ಣೀರಾದರು.
ಭೂಕುಸಿತ ದುರಂತದ ನಂತರ ತಮ್ಮ ನಿಕಟ ಸ್ನೇಹಿತರು, ಬಂಧುಗಳನ್ನು ಹಲವು ದಿನಗಳ ನಂತರ ಭೇಟಿಯಾದಾಗ ದುಃಖ ಉಮ್ಮಳಿಸಿ ಬಂದಿತು. ಒಬ್ಬರನ್ನೊಬ್ಬರು ತಬ್ಬಿಕೊಂಡು ಸಂತೈಸಿಕೊಂಡರು. ಜುಲೈ 30 ರಂದು ಸಂಭವಿಸಿದ ಭೂಕುಸಿತಕ್ಕೂ ಮೊದಲು ತಾವೆಲ್ಲರೂ ಹೇಗೆ ಸಂತೋಷದ ಕುಟುಂಬವಾಗಿ ಒಟ್ಟಿಗೆ ವಾಸಿಸುತ್ತಿದ್ದೆವು ಎಂಬುದನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದರು.
STORY | #Wayanad bypoll: Emotional scenes at polling booths for landslide survivors
— Press Trust of India (@PTI_News) November 13, 2024
READ: https://t.co/ULcoybGoGY
VIDEO: pic.twitter.com/p8jW430byp
ಮತ ಚಲಾಯಿಸಲು ಬಂದ ವೃದ್ಧರೊಬ್ಬರು, ತಮ್ಮವರನ್ನ ಕಂಡು ಗದ್ಗದಿತರಾದರು. ಧರ್ಮ ಭೇದವಿಲ್ಲದೆ ಹಬ್ಬ ಆಚರಣೆ, ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೆನಪಿಸಿಕೊಂಡರು. ಆತನ ಸ್ನೇಹಿತ ದುಃಖಿಸುತ್ತಿದ್ದಾಗ, ಅಳಬೇಡ ಎಲ್ಲವೂ ಸರಿಯಾಗುತ್ತದೆ. ಸುಮ್ಮನಿರು ಎಂದು ಅಪ್ಪಿಕೊಂಡು ಸಾಂತ್ವನ ಹೇಳಿದರು.
ಭೂಕುಸಿತದ ನಂತರ ಬದುಕುಳಿದವರನ್ನು ದುರಂತದ ಸ್ಥಳದಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ತಮ್ಮನ್ನು ಸ್ಥಳಾಂತರಿಸಿ ಪುನರ್ವಸತಿ ನೀಡಿದ ಬಗ್ಗೆ ತಮ್ಮ ಆಪ್ತರಲ್ಲಿ ಮಹಿಳೆಯೊಬ್ಬರು ಹೇಳಿಕೊಂಡರು. ಹಲವು ದಿನಗಳ ನಂತರ ಭೇಟಿಯಾದ್ದರಿಂದ ಎಲ್ಲಿ ವಾಸಿಸುತ್ತಿದ್ದೀರಿ, ಏನು ಮಾಡುತ್ತಿದ್ದೀರಿ ಎಂದು ಪರಸ್ಪರ ಮಾತನಾಡಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಭೂಕುಸಿತದಲ್ಲಿ ಬದುಕುಳಿದು ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರಿಗಾಗಿ ಸರ್ಕಾರ ವಿವಿಧ ಸ್ಥಳಗಳಿಂದ ಮತಗಟ್ಟೆಗಳನ್ನು ತಲುಪಲು ಉಚಿತ ವಾಹನ ಸೇವೆಯನ್ನು ಒದಗಿಸಿದೆ.
ಬದುಕನ್ನೇ ಬದಲಿಸಿದ ಭೂಕುಸಿತ: ಜುಲೈ ತಿಂಗಳಲ್ಲಿ ನಡೆದ ಭೀಕರ ಭೂಕುಸಿತವು ಪುಂಚಿರಿಮಟ್ಟಂ, ಚೂರಲ್ಮಲಾ ಮತ್ತು ಮುಂಡಕ್ಕೈ ಗ್ರಾಮಗಳನ್ನು ನಾಮಾವಶೇಷ ಮಾಡಿದೆ. ಇಲ್ಲಿದ್ದ ನೂರಾರು ಕುಟುಂಬಗಳು ಕಂಡು ಕೇಳರಿಯದ ರೀತಿಯ ಪ್ರಕೃತಿ ವಿಕೋಪಕ್ಕೆ ಬಲಿಯಾಗಿವೆ. ಕೆಲವೆಡೆ ಇಲ್ಲೊಂದು ಗ್ರಾಮವಿತ್ತು, ಜನರು ವಾಸಿಸುತ್ತಿದ್ದರು ಎಂಬುದೇ ಮರೆಯಾಗಿದೆ. ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೂರು ಗ್ರಾಮಗಳ ನೂರಾರು ಮನೆಗಳು ನಾಶವಾಗಿವೆ.
ಇದನ್ನೂ ಓದಿ: ಹಳಿ ತಪ್ಪಿದ ಗೂಡ್ಸ್ ರೈಲು: ಟ್ರ್ಯಾಕ್ ಹಾನಿಯಿಂದಾಗಿ 39 ರೈಲುಗಳ ಸಂಚಾರ ಪೂರ್ಣ ರದ್ದು