ಅಲ್ಲೂರಿ ಸೀತಾರಾಮರಾಜು, ಆಂಧ್ರಪ್ರದೇಶ: ಸಾಮಾನ್ಯವಾಗಿ ನೆಲದಲ್ಲಿ ಬೋರ್ವೇಲ್ ಹಾಕಿದ್ದಾಗ ನೀರು ಉಕ್ಕಿ ಬರುವುದು ಸಾಮಾನ್ಯ. ಆದರೆ ಮರ ಕಡಿದಾಗ ನೀರು ಹರಿಯುವುದನ್ನು ನೀವು ಎಂದಾದ್ರೂ ನೋಡಿದ್ದೀರಾ?. ಇದು ವಿಚಿತ್ರ ಎನಿಸಿದರೂ ನೀವು ಕೇಳುತ್ತಿರುವುದು ಸತ್ಯ. ಈ ಅಪರೂಪದ ದೃಶ್ಯ ಕಂಡು ಬಂದಿದ್ದು ಆಂಧ್ರಪ್ರದೇಶ ರಾಜ್ಯದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ.
ಪಾಪಿಕೊಂಡಲ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಕಿಂಟುಕೂರು ಪ್ರದೇಶದಲ್ಲಿರುವ ಬೇಸ್ ಕ್ಯಾಂಪ್‌ನಲ್ಲಿ ಪರಿಶೀಲನೆಗೆ ತೆರಳಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಗಾವಲಿನಲ್ಲಿ ಮರದ ತುದಿ ಕತ್ತರಿಸುವಾಗ ಇದ್ದಕ್ಕಿದ್ದಂತೆ ನೀರು ಹರಿದಿರುವ ಅಪರೂಪದ ದೃಶ್ಯ ಕಂಡುಬಂದಿದೆ.
ಅಲ್ಲಿ ಕಪ್ಪು ಮಡ್ಡಿ ಮರದಿಂದ ನೀರು ಜಿನುಗುತ್ತಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಮರದ ತೊಗಟೆಯನ್ನು ಕತ್ತರಿಸಿದ್ದಾಗ ನೀರು ನಲ್ಲಿಯಂತೆ ಜೋರಾಗಿ ಬರಲು ಪ್ರಾರಂಭಿಸಿತು. ಹಾಗೆ ಬಂದ ನೀರನ್ನು ನೋಡಿ ಅರಣ್ಯಾಧಿಕಾರಿಗಳು ಅಚ್ಚರಿಗೊಂಡಿದ್ದಾರೆ. ಆ ಮರದಿಂದ ಸುಮಾರು ಇಪ್ಪತ್ತು ಲೀಟರ್ ನೀರು ಹೊರ ಬಂದಿದೆ ಎಂದು ಹೇಳಲಾಗುತ್ತಿದೆ. ಅರಣ್ಯಾಧಿಕಾರಿಗಳು ಮರದಲ್ಲಿದ್ದ ನೀರನ್ನು ಕುಡಿದು ಪರಿಶೀಲಿಸಿದರು. ಬಳಿಕ ಆ ಮರಕ್ಕೆ ಜಲಧಾರೆ ವೃಕ್ಷ ಎಂದು ಹೆಸರಿಟ್ಟರು.
ಇನ್ನು ಮರ ಕಡಿದ ಕೂಡಲೇ ನೀರು ಚಿಮ್ಮುತ್ತಿರುವ ದೃಶ್ಯವನ್ನು ಅಲ್ಲಿನ ಸಿಬ್ಬಂದಿ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲೂರಿ ಜಿಲ್ಲೆಯ ರಂಪಚೋಡವರಂ-ಕಿಂಟುಕೂರು ಅರಣ್ಯ ಪ್ರದೇಶದಲ್ಲಿ ಸಾವಿರಾರು ಕಪ್ಪು ಮಡ್ಡಿ ಮರಗಳಿವೆ. ಕೆಲವು ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯನ್ನು ಹೊಂದಿವೆ. ಕಪ್ಪು ಮಡ್ಡಿ ಮರವು ಸುಮಾರು 20 ಲೀಟರ್ ಶುದ್ಧ ನೀರನ್ನು ಸಂಗ್ರಹಿಸಿಕೊಳ್ಳುತ್ತದೆ. ಗೋದಾವರಿ ನದಿಯ ಪ್ರದೇಶಗಳಲ್ಲಿ, ಅರಣ್ಯ ಪ್ರದೇಶದಲ್ಲಿ ಈ ಕಪ್ಪು ಮಡ್ಡಿ ಮರಗಳು ಹೇರಳವಾಗಿವೆ. ನೂರರಲ್ಲಿ ಒಂದು ಮರದಲ್ಲಿ ಮಾತ್ರ ನೀರು ಸಂಗ್ರಹ ವ್ಯವಸ್ಥೆ ಇದೆ ಎನ್ನುತ್ತಾರೆ ತಜ್ಞರು.