ಚಂಡೀಗಢ(ಹರಿಯಾಣ): ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹಗೊಂಡ ಭಾರತೀಯ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ರಾಜಕೀಯಕ್ಕೆ ಬರುತ್ತಾರಾ?. ಹೀಗೊಂದು ಸುದ್ದಿ ಜೋರಾಗಿ ಹರಿದಾಡುತ್ತಿದೆ. ಹರಿಯಾಣದವರಾದ ವಿನೇಶ್, ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ. ಕಾಂಗ್ರೆಸ್ ನಾಯಕರ ಜೊತೆಗೆ ಕುಸ್ತಿಪಟು ಕಾಣಿಸಿಕೊಂಡಿದ್ದು ಇದಕ್ಕೆ ಪುಷ್ಟಿ ನೀಡಿದೆ.
ಪ್ಯಾರಿಸ್ ಒಲಿಂಪಿಕ್ಸ್ನ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್, 100 ಗ್ರಾಂ ದೇಹ ತೂಕ ಹೆಚ್ಚಳದಿಂದಾಗಿ ಅನರ್ಹ ಶಿಕ್ಷೆಗೆ ಒಳಗಾಗಿದ್ದರು. ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯೂ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ ತಿರಸ್ಕರಿಸಿದೆ. ಇದರಿಂದ ಬೇಸತ್ತ ಅವರು ಕುಸ್ತಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ರಾಜಕೀಯಕ್ಕೆ ಅಡಿ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.
खरा सोना @phogat_vinesh 🥇 pic.twitter.com/zZMnvykTMp
— Deepender S Hooda (@DeependerSHooda) August 17, 2024
ಮೂಲಗಳ ಪ್ರಕಾರ, ಘೋಷಣೆಯಾಗಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವಂತೆ ರಾಜಕೀಯ ಪಕ್ಷಗಳು ಎಡತಾಕಿವೆ. ಆದರೆ, ಕುಸ್ತಿಪಟು ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ನಿಲುವು ತಳೆದಿಲ್ಲ. ಸದ್ಯ, ಎಲ್ಲ ಕುಸ್ತಿ ಸ್ಪರ್ಧೆಗಳಿಂದ ಹಿಂದೆ ಸರಿದ ಕಾರಣ ಅವರನ್ನು ರಾಜಕೀಯಕ್ಕೆ ಕರೆತಂದು ಲಾಭ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ.
ವಿನೇಶ್ ರಾಜಕೀಯ ಎಂಟ್ರಿ ಬಗ್ಗೆ ಕುಟುಂಬದ ಆಪ್ತ ಮೂಲಗಳು ಪ್ರತಿಕ್ರಿಯಿಸಿದ್ದು, ಆಕೆ ಏಕೆ ರಾಜಕೀಯಕ್ಕೆ ಬರಬಾರದು?. ರಾಜಕೀಯಕ್ಕೆ ಬರುವುದಿಲ್ಲ ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ, ಇದೇ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲೂಬಹುದು. ಕೆಲವು ರಾಜಕೀಯ ಪಕ್ಷಗಳು ಅವರನ್ನು ಈಗಾಗಲೇ ಸಂಪರ್ಕಿಸಿವೆ. ರಾಜಕೀಯಕ್ಕೆ ಬರಲು ಕೋರಿವೆ. ಆಕೆ ಯಾವ ಪಕ್ಷ ಸೇರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ತಿಳಿಸಿವೆ.
ಸಹೋದರಿ ವಿರುದ್ಧವೇ ಫೈಟ್?: ಇನ್ನೊಂದು ಸುದ್ದಿಯ ಪ್ರಕಾರ, ವಿನೇಶ್ ಫೋಗಟ್ ಅವರು ತಮ್ಮ ಸಹೋದರಿಯ ವಿರುದ್ಧವೇ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಸಹೋದರಿ ಬಬಿತಾ ಫೋಗಟ್ ವಿರುದ್ಧ ಸ್ಪರ್ಧಿಸಲು ಪ್ರಯತ್ನಗಳು ನಡೆದಿವೆ. ಬಬಿತಾ ಫೋಗಟ್ ಅವರು 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೇರಿ, ದಾದ್ರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈ ಚುನಾವಣೆಯಲ್ಲಿ ಅವರಿಗೆ ಮತ್ತೆ ಕಮಲ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಕಾಂಗ್ರೆಸ್ಗೆ ವಿನೇಶ್?: ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದ ವಿನೇಶ್ ಫೋಗಟ್ ಅವರನ್ನು ಕಾಂಗ್ರೆಸ್ ಸೆಳೆಯುವ ಸಾಧ್ಯತೆ ಇದೆ. ಅನರ್ಹಗೊಂಡು ಪ್ಯಾರಿಸ್ನಿಂದ ಭಾರತಕ್ಕೆ ಬಂದ ಬಳಿಕ ಅವರನ್ನು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ ಅವರು ಆತ್ಮೀಯವಾಗಿ ಸ್ವಾಗತಿಸಿದ್ದರು. ಮೆರವಣಿಗೆಯಲ್ಲಿಯೂ ಭಾಗವಹಿಸಿದ್ದರು. ಕುಸ್ತಿಪಟುವನ್ನು ರಾಜ್ಯಸಭೆಗೆ ಕಳುಹಿಸಬೇಕು ಎಂದು ಹೂಡಾ ಈ ಹಿಂದೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರಬಹುದು ಎಂಬ ಊಹಾಪೋಹಗಳಿವೆ.
ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 1ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.