ಬೆಂಗಳೂರು: ಇ-ಕಾಮರ್ಸ್ ದೈತ್ಯ ಅಮೆಜಾನ್‌ನಲ್ಲಿ ಗ್ರಾಹಕರೊಬ್ಬರು ಎಕ್ಸ್‌ಬಾಕ್ಸ್ ಕಂಟ್ರೋಲರ್ಗೆ ಆರ್ಡರ್ ಕೊಟ್ಟಿದ್ದರು. ಆದರೆ, ಕಂಪನಿಯಿಂದ ಬಂದ ಬಾಕ್ಸ್‌ನಲ್ಲಿ ಜೀವಂತ ಹಾವು ಕೂಡಾ ಇತ್ತು!. ಇದು ಆಶ್ಚರ್ಯವಾದರೂ ಸತ್ಯ. ಅಮೆಜಾನ್ ಪ್ಯಾಕೇಜ್‌ನಲ್ಲಿ ವಿಷಕಾರಿ ಹಾವು ಪತ್ತೆಯಾಗಿದೆ. ಇದರ ವಿಡಿಯೋವನ್ನು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಸರ್ಜಾಪುರ ನಿವಾಸಿಗಳಾದ ದಂಪತಿ ಅಮೆಜಾನ್ ಬಾಕ್ಸ್‌ನಲ್ಲಿ ಹಾವು ಕಂಡು ಭಯಗೊಂಡಿದ್ದಾರೆ. ಪ್ಯಾಕೇಜ್ಗೆ ಬಳಸಲಾದ ಪಟ್ಟಿಗೆ ಹಾವು ಅಂಟಿಕೊಂಡಿತ್ತು. ಇದು ತೀವ್ರ ವಿಷಕಾರಿ ಹಾವು ಎಂದು ಗುರುತಿಸಲಾಗಿದೆ.
ಬಾಕ್ಸ್ನಿಂದ ಹೊರಬಂದ ಹಾವು: ಐಟಿ ವೃತ್ತಿಪರ ದಂಪತಿ ಬಾಕ್ಸ್ ತೆರೆದಾಗ ಹಾವನ್ನು ಕಂಡಿದ್ದಾರೆ. ತಕ್ಷಣವೇ ಬಕೆಟ್ನಲ್ಲಿಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. 'ನಾವು ಇತ್ತೀಚೆಗೆ ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದೆವು. ಕಂಪನಿಯವರು ಪ್ಯಾಕೇಜ್‌ನಲ್ಲಿ ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದ್ದಾರೆ. ಡೆಲಿವರಿ ಬಾಯ್ ಪ್ಯಾಕೇಜ್ ಬಾಕ್ಸ್ ನೀಡಿದ ಬಳಿಕ ಅದನ್ನು ತೆರೆದಾಗ, ಹಾವು ಪಟ್ಟಿಗೆ ಅಂಟಿಕೊಂಡಿತ್ತು. ನಾವು ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತಿದ್ದೇವೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ. ಜೊತೆಗೆ ಇದನ್ನು ಕಂಡ ಪ್ರತ್ಯಕ್ಷದರ್ಶಿಗಳೂ ಇದ್ದಾರೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಈ ಹಾವು ನಾಗರ ಎಂದು ಗುರುತಿಸಲಾಗಿದೆ. ಹಾವು ಟೇಪ್‌ಗೆ ಅಂಟಿಕೊಂಡಿತ್ತು. ಇದರಿಂದಾಗಿ ಯಾರಿಗೂ ಹಾನಿಯಾಗಿಲ್ಲ. ಹಾಗೊಂದು ವೇಳೆ ಅದು ಬಾಕ್ಸ್‌ನಲ್ಲಿ ಓಡಾಡುತ್ತಿದ್ದರೆ, ನಮ್ಮ ಗತಿ ಏನಾಗಬೇಡ?. ಜೀವ ಹಾನಿಯಾಗುತ್ತಿರಲಿಲ್ಲವೇ' ಎಂದು ದಂಪತಿ ಪ್ರಶ್ನಿಸಿದ್ದಾರೆ.
ಅಮೆಜಾನ್ ಗೋದಾಮಿನಲ್ಲಿ ಸ್ವಚ್ಛತೆ ಮತ್ತು ಕಾಳಜಿ ವಹಿಸುತ್ತಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಅತ್ಯಂತ ವಿಷಕಾರಿ ಹಾವನ್ನು ಬಾಕ್ಸ್‌ನಲ್ಲಿ ಕಳುಹಿಸಿ, ತಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಕ್ಕಾಗಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷಮೆಯಾಚಿಸಿದ ಅಮೆಜಾನ್: ವೈರಲ್ ವಿಡಿಯೋಗೆ ಕ್ಷಮೆ ಕೋರಿರುವ ಅಮೆಜಾನ್ ಕಂಪನಿ, ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು. ಗ್ರಾಹಕರು, ಉದ್ಯೋಗಿಗಳು ಮತ್ತು ಸಹವರ್ತಿಗಳ ಸುರಕ್ಷತೆಯು ನಮಗೆ ಪ್ರಮುಖ ಆದ್ಯತೆಯಾಗಿದೆ. ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆದ ಪ್ರಮಾದಕ್ಕೆ ಗ್ರಾಹಕರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಅಮೆಜಾನ್ ಇಂಡಿಯಾ ವಕ್ತಾರರು ಬುಧವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ Zomatoದಲ್ಲಿ ನಿಮ್ಮಿಷ್ಟದ ಊಟ ಮಾತ್ರವಲ್ಲ ಚಲನಚಿತ್ರ ಟಿಕೆಟ್‌ಗಳೂ ಲಭ್ಯ! - Zomato Paytm Business Deal