ನವದೆಹಲಿ: 2023ರ ಜನವರಿಗೆ ಹೋಲಿಸಿದಾಗ 2024ರ ಜನವರಿ ತಿಂಗಳು ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಿಗೆ ಹೆಚ್ಚು ದುಬಾರಿಯಾಗಿದೆ. ಎರಡು ಆಹಾರ ಪದ್ಧತಿ ಅನುಸರಿಸುವ ವರ್ಗದವರ ಊಟದ ಬೆಲೆಯನ್ನು ಹೋಲಿಸಿದಾಗ ಸಸ್ಯಾಹಾರದ ಊಟದ ತಾಲಿಯ (ತಟ್ಟೆ) ದರ ಶೇ 5ರಷ್ಟು ಏರಿಕೆ ಕಂಡಿದೆ. ಆದರೆ, ಮಾಂಸಾಹಾರಿಗಳ ತಾಲಿ ಶೇ 13ರಷ್ಟು ಇಳಿಕೆಯಾಗಿದೆ ಎಂದು ಸಿಆರ್ಐಎಸ್ಐಎಲ್ ವರದಿ ಹೇಳುತ್ತದೆ.
ಸಸ್ಯಾಹಾರದ ಊಟದ ದರ ಏರಿಕೆಗೆ ಪ್ರಮುಖ ಕಾರಣ ಈರುಳ್ಳಿ ಮತ್ತು ಟೊಮೆಟೊ ದರ ಎಂದು ವರದಿ ತಿಳಿಸಿದೆ. ಈರುಳ್ಳಿ ದರ ಶೇ 35ರಷ್ಟು ಮತ್ತು ಟೊಮೆಟೊ ದರ ಶೇ 25ರಷ್ಟು ಏರಿಕೆಯಾಗಿರುವುದರ ಜೊತೆಗೆ ಅಕ್ಕಿ ದರ ಕೂಡ ಶೇ 12, ಧಾನ್ಯಗಳ ದರ ಶೇ 9ರಷ್ಟು ಹೆಚ್ಚಳವಾಗಿರುವುದು ಊಟದ ಬೆಲೆ ಏರಿಕೆಗೆ ಕೊಡುಗೆ ನೀಡಿದ ಅಂಶ.
ಸರ್ಕಾರ ಕೆಲವು ದಿನದ ಹಿಂದಷ್ಟೇ ಅಕ್ಕಿ ವ್ಯಾಪಾರಿಗಳು, ಡೀಲರ್‌ಗಳು, ವಿತರಕರು ಮತ್ತು ಚಿಲ್ಲರೆ ಮಾರಾಟಗಾರರಿಗೆ ದರವನ್ನು ವಾರದ ಆಧಾರದ ಮೇಲೆ ಬಹಿರಂಗಪಡಿಸುವಂತೆ ಸೂಚಿಸಿತ್ತು. ಆಗ ಅದರ ಭಾರತೀಯ ಮನೆಗಳಲ್ಲಿ ಬಳಕೆ ಮಾಡುವ ಅಕ್ಕಿ ದರವನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿತ್ತು. ಒಂದು ಊಟ ತಯಾರಿಕೆಯ ದರಗಳನ್ನು ಬಳಕೆ ಮಾಡುವ ಪದಾರ್ಥಗಳ ಬೆಲೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಪದಾರ್ಥಗಳ ಬೆಲೆಯ ಮಾಸಿಕ ಬದಲಾವಣೆ ಸಾಮಾನ್ಯ ಜನರ ಖರ್ಚು ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಬಳಸುವ ತರಕಾರಿ, ಧಾನ್ಯಗಳು, ತರಕಾರಿ, ಕೋಳಿ ಮಾಂಸ, ಮಸಾಲೆ, ಅಡುಗೆ ಎಣ್ಣೆಗಳ ಬೆಲೆಗಳು ಕೂಡ ತಾಲಿ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ. ಮಾಂಸಾಹಾರದ ತಾಲಿ ದರ ಇಳಿಕೆಗೆ ಕಾರಣ ಕೋಳಿಯ ದರ ಶೇ 26ರಷ್ಟು ಇಳಿಕೆ ಕಂಡಿರುವ ಜೊತೆಗೆ ಅದರ ಹೆಚ್ಚಿನ ಉತ್ಪಾದನೆಯಾಗಿದೆ.
ಮಾಸಿಕ ಆಧಾರದ ಮೇಲೆ ಲೆಕ್ಕ ಹಾಕಿದಾಗ ಸಸ್ಯಾಹಾರ ಮತ್ತು ಮಾಂಸಾಹಾರದ ತಾಲಿಗಳ ಬೆಲೆ ಕ್ರಮವಾಗಿ ಶೇ 6 ಮತ್ತು ಶೇ 8ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ, ಈರುಳ್ಳಿ ಮತ್ತು ಟೊಮೆಟೊಗಳ ದೇಶೀಯ ಪೂರೈಕೆಯಲ್ಲಿ ಹೆಚ್ಚಾಗಿದ್ದು, ರಫ್ತು ಮಾರಾಟ ನಿರ್ಬಂಧಿಸಿರುವುದು. ಇದರಿಂದ ಉತ್ತರ ಮತ್ತು ಪೂರ್ವ ರಾಜ್ಯದಲ್ಲಿ ತಾಜಾ ಟೊಮೆಟೊಗಳ ಲಭ್ಯತೆ ಹೆಚ್ಚಿದೆ. ಮಾಂಸಾಹಾರದ ತಾಲಿ ವೇಗವಾಗಿ ಇಳಿಕೆಯಾಗಲು ಕಾರಣ ಕೋಳಿ ಮಾಂಸದ ದರ ಶೇ 8ರಿಂದ 10ರಷ್ಟು ಇಳಿಕೆ ಆಗಿರುವುದು.
ಸಸ್ಯಾಹಾರದ ತಾಲಿಯಲ್ಲಿ ರೋಟಿ, ತರಕಾರಿ (ಈರುಳ್ಳಿ, ಟೊಮೆಟೊ ಮತ್ತು ಆಲೂಗಡ್ಡೆ), ಅನ್ನ, ದಾಲ್, ಮೊಸರು ಮತ್ತು ಸಲಾಡ್ ಇರುತ್ತದೆ. ಸಸ್ಯಾಹಾರದ ತಾಲಿಯಲ್ಲಿ ಹೊಂದಿರುವ ವಸ್ತುಗಳನ್ನೇ ಮಾಂಸಾಹಾರದ ತಾಲಿ ಹೊಂದಿದ್ದರೂ ಇದರಲ್ಲಿ ದಾಲ್ (ಬೇಳೆ) ಇರುವುದಿಲ್ಲ. ಇದರ ಬದಲಾಗಿ ಕೋಳಿ ಮಾಂಸ ಇರುತ್ತದೆ. ಜನವರಿಯಲ್ಲಿ ಕೋಳಿ ದರವನ್ನು ಅಂದಾಜಿಸಲಾಗಿದೆ.
ಖಾರಿಫ್ ಮತ್ತು ಖಾರಿಫ್ ನಂತರದ ಅವಧಿಯಲ್ಲಿ ಈರುಳ್ಳಿ ಬೆಳೆ ಕುಸಿತವಾಗಿದೆ. ಕೇಂದ್ರ ಸರ್ಕಾರ ಕೂಡಾ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಇದಾದ ನಂತರ ಶೇ 80ರಷ್ಟು ದರ ಇಳಿಕೆಯಾಗಿದೆ.
ಇದನ್ನೂ ಓದಿ: ಆತ್ಮ ವಿಶ್ವಾಸ ವೃದ್ಧಿಸಲು, ಮೆದುಳು ಚುರುಕಾಗಿಸಲು ಈ ಆಹಾರ ಸೇವಿಸಿ