ಡೆಹ್ರಾಡೂನ್ (ಉತ್ತರಾಖಂಡ): ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ, ಸರ್ವ ಧಮಗಳನ್ನು ಒಂದೇ ಕಾನೂನಿನಡಿ ತರುವ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಮಸೂದೆಯನ್ನು ಉತ್ತರಾಖಂಡ ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ಪಡೆದಿದೆ. ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಉಳಿದಿದ್ದು, ಬಳಿಕ ಎಲ್ಲ ಧರ್ಮಗಳಿಗೆ ಸಮಾನವಾದ ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ.
ಫೆಬ್ರವರಿ 6 ರಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ಬಳಿಕ ಎರಡು ದಿನಗಳ ಚರ್ಚೆಯ ನಂತರ ಇಂದು ವಿಪಕ್ಷಗಳೂ ಸಹ ಮಸೂದೆಯನ್ನು ಒಪ್ಪಿಕೊಂಡಿವೆ. ಈ ಮೂಲಕ ಯುಸಿಸಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡ ದೇಶದ ಮೊದಲ ರಾಜ್ಯ ಎಂಬ ದಾಖಲೆಯನ್ನು ಉತ್ತರಾಖಂಡ ಬರೆಯಿತು.
ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮಸೂದೆಯನ್ನು ಸದನ ಸಮಿತಿಗೆ ನೀಡಬೇಕು ಎಂಬ ಪ್ರಸ್ತಾಪವನ್ನು ಸಲ್ಲಿಸಿದರೂ, ವಿಧಾನಸಭೆಯಲ್ಲಿ ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಧ್ವನಿ ಮತದ ಮೂಲಕ ಬಹುಮತದ ಮಸೂದೆಯನ್ನು ಅಂಗೀಕರಿಸಲಾಯಿತು. ಸ್ಪೀಕರ್ ಧ್ವನಿ ಮತಕ್ಕೆ ಹಾಕಿದಾಗ ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು. ವಿಧೇಯಕವನ್ನು ಸದನ ಅಂಗೀಕರಿಸಿದೆ ಎಂದು ಸ್ಪೀಕರ್ ಘೋಷಿಸಿದರು. ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಇತಿಹಾಸ ಬರೆದ ಉತ್ತರಾಖಂಡ ರಾಜ್ಯ: 7 ಫೆಬ್ರವರಿ 2024 ರಾಜಕೀಯ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಮಹತ್ವದ ದಿನವಾಗಿದೆ. ಜೊತೆಗೆ ಉತ್ತರಾಖಂಡ ವಿಧಾನಸಭೆಗೂ ಐತಿಹಾಸಿಕ ದಿನವಾಗಿದೆ. ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸುವುದರೊಂದಿಗೆ ಉತ್ತರಾಖಂಡವು ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಫೆಬ್ರವರಿ 5 ರಿಂದ ಆರಂಭವಾದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಫೆಬ್ರವರಿ 6 ರಂದು ಮಸೂದೆಯನ್ನು ಮಂಡಿಸಲಾಯಿತು. ಬಳಿಕ 6 ಮತ್ತು 7 ರಂದು ಎರಡು ದಿನಗಳ ಕಾಲ ಸಂಹಿತೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ವಿಧೇಯಕದ ನಿಬಂಧನೆಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ತಮ್ಮ ಸಲಹೆಗಳನ್ನು ನೀಡಿದರು. ಕೆಲವು ಸಲಹೆಗಳ ಕುರಿತು ಸದನದಲ್ಲಿ ಚರ್ಚಿಸಲಾಯಿತು. ಪ್ರತಿಪಕ್ಷಗಳ ಕೆಲ ಸದಸ್ಯರು ಚರ್ಚೆಗೂ ಮುನ್ನ ವಿಧೇಯಕವನ್ನು ಅಧ್ಯಯನ ಮಾಡಲು ಸಮಯ ನೀಡಬೇಕು ಎಂದು ವಿಧಾನಸಭೆ ಸ್ಪೀಕರ್‌ಗೆ ಕೋರಿದರು.
ಫೆ.7 ರಂದು ಮಸೂದೆ ಕುರಿತು ನಡೆದ ಚರ್ಚೆಯಲ್ಲಿ ಪ್ರತಿಪಕ್ಷಗಳು ಮಸೂದೆಯಲ್ಲಿನ ಲೋಪಗಳನ್ನು ಎತ್ತಿಹಿಡಿದರು. ಮಸೂದೆಯು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರೇಮಚಂದ್ ಅಗರ್ವಾಲ್, ಶಾಸಕ ಮುನ್ನಾ ಸಿಂಗ್ ಚೌಹಾಣ್ ಸೇರಿದಂತೆ ಹಲವು ಶಾಸಕರು ಮಸೂದೆಯನ್ನು ವಿವರವಾಗಿ ಪ್ರಸ್ತಾಪಿಸಿದರು. ಕೊನೆಯಲ್ಲಿ ಅಂಗೀಕಾರ ಪಡೆದುಕೊಳ್ಳಲಾಯಿತು.
ಮಸೂದೆಯಲ್ಲಿ ಎಲ್ಲಾ ಧರ್ಮಗಳ ಮದುವೆ, ವಿಚ್ಛೇದನ, ಜೀವನಾಂಶ ಮತ್ತು ಉತ್ತರಾಧಿಕಾರಕ್ಕಾಗಿ ಏಕರೂಪ ಕಾನೂನು ಅನ್ವಯವಾಗುವಂತೆ ಮಾಡಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕುಗಳನ್ನು ಶಿಫಾರಸು ಮಾಡಲಾಗಿದೆ. ಬುಡಕಟ್ಟು ಜನಾಂಗವನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಇದನ್ನೂ ಓದಿ: ಉತ್ತರ-ದಕ್ಷಿಣವೆಂಬ ದೇಶ ವಿಭಜನೆಯ ಹೇಳಿಕೆ ನಿಲ್ಲಿಸಿ: ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ