ಮೀರತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೀರತ್ನಲ್ಲಿ ಆಘಾತಕಾರಿ, ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ಪನ ಬೈಗುಳಕ್ಕೆ ಬೇಸತ್ತು ಮೂವರು ಬಾಲಕಿಯರು ಮನೆ ಬಿಟ್ಟು ಬಂದಿದ್ದಾರೆ. ಅದೃಷ್ಟವಶಾತ್ ಗ್ರಾಮದಿಂದ ಹೊರ ಹೋಗುವ ಮುನ್ನವೇ ಮೂವರನ್ನೂ ಪೊಲೀಸರು ಪತ್ತೆ ಹಚ್ಚಿ, ರಕ್ಷಣೆ ಮಾಡಿದ್ದಾರೆ. ಸದ್ಯ ಅಜ್ಜಿಯ ಬಳಿ ಈ ಹೆಣ್ಣು ಮಕ್ಕಳನ್ನು ಬಿಡಲಾಗಿದೆ.
ಇಲ್ಲಿನ ಸರ್ಧಾನ ಪ್ರದೇಶದ ನಿವಾಸಿಯೊಬ್ಬರಿಗೆ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳಿದ್ದಾರೆ. ಮಂಗಳವಾರ (ಮೇ 28) ಇದ್ದಕ್ಕಿದ್ದಂತೆ ಮೂವರು ಸಹೋದರಿಯರು ಸಹ ಮನೆಯಿಂದ ಹೊರಟು ಬಂದಿದ್ದಾರೆ. ಬೇರೆ ಊರಿಗೆ ಹೋಗುವ ಯೋಜನೆಯಲ್ಲಿದ್ದ ಈ ಬಾಲಕಿಯರು ಯಾರ ಕಣ್ಣಿಗೆ ಬೀಳದಂತೆ ರಾತ್ರಿಯಿಡೀ ಕಬ್ಬಿನ ಗದ್ದೆಯಲ್ಲಿ ಅಡಗಿಕೊಂಡಿದ್ದರು. ಮತ್ತೊಂದೆಡೆ, ತನ್ನ ಮಕ್ಕಳು ಕಾಣದಿದ್ದಾಗ ತಕ್ಷಣವೇ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಅಂತೆಯೇ, ಪೊಲೀಸರು ಶೋಧ ಕಾರ್ಯಕ್ಕೆ ಇಳಿದಿದ್ದರು. ಈ ವೇಳೆ ಮರು ದಿನ ಎಂದರೆ, ಬುಧವಾರ ಬೆಳಗ್ಗೆಯೇ ಗ್ರಾಮದ ಹೊರಗೆಡೆಯ ಗೆದ್ದೆಯೊಂದರಲ್ಲಿ ಮೂವರು ಬಾಲಕಿಯರನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಈಗಲೂ ಈ ಬಾಲಕಿಯರು ತಮ್ಮ ತಂದೆಯೊಂದಿಗೆ ವಾಸಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಪೊಲೀಸರು ಸದ್ಯ ಮೂವರನ್ನೂ ಅಜ್ಜಿಗೆ ಒಪ್ಪಿಸಿದ್ದಾರೆ.
ಅಮ್ಮ ಸಾವು, ಅಪ್ಪನ ಬೈಗುಳಕ್ಕೆ ಬೇಸತ್ತಿದ್ದ ಬಾಲಕಿಯರು: ಈ ಮೂವರು ಹೆಣ್ಣು ಮಕ್ಕಳ ತಾಯಿ 10 ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಸದ್ಯ ತಂದೆಯೊಬ್ಬರು ಇದ್ದಾರೆ. ಮಂಗಳವಾರ ಆತ ಕೆಲಸಕ್ಕೆ ಹೋಗಿದ್ದಾಗ ಮನೆ ತೊರೆದು ಬಾಲಕಿಯರು ಬಂದಿದ್ದರು. ಸದ್ಯ ಮೂವರನ್ನೂ ರಕ್ಷಣೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ನಂತರ ಬಾಲಕಿಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ, ತಾಯಿಯನ್ನು ಕಳೆದುಕೊಂಡ ನಂತರ ತಂದೆ ಪ್ರತಿದಿನವೂ ನಮಗೆ ಬೈಯುತ್ತಲೇ ಇರುತ್ತಾರೆ. ತಂದೆಯ ಬೈಗುಳದಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮನೆ ಬಿಟ್ಟು ಬಂದಿರುವುದಾಗಿ ಬಾಲಕಿಯರು ವಿವರಿಸಿದ್ದಾರೆ. ಅಲ್ಲದೇ, ಮನೆಯಿಂದ ಓಡಿ ಬಂದ ನಂತರ ನಾವು ಗ್ರಾಮದ ಹೊರಗಿನ ಕಬ್ಬಿನ ಗದ್ದೆಯಲ್ಲಿ ಅಡಗಿಕೊಂಡೆವು. ಇಡೀ ರಾತ್ರಿಯೂ ಅಲ್ಲಿಯೇ ಕಳೆದಿದ್ದೇವೆ. ಅಲ್ಲಿಂದ ಮರು ದಿನ ಬೇರೆ ಊರಿಗೆ ಹೋಗಲು ತೀರ್ಮಾನ ಮಾಡಿದ್ದೆವು ಎಂದೂ ಈ ಸಹೋದರಿಯರು ಪೊಲೀಸರ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 150 ಅಡಿ ಆಳದ ಕಣಿವೆಗೆ ಬಿದ್ದ ಯಾತ್ರಾರ್ಥಿಗಳಿದ್ದ ಬಸ್; 21 ಮಂದಿ ದಾರುಣ ಸಾವು