ಕಾನ್ಪುರ (ಉತ್ತರ ಪ್ರದೇಶ): ಬೆಂಗಳೂರು, ದೆಹಲಿ - ಎನ್‌ಸಿಆರ್, ಜೈಪುರದ ಶಾಲೆಗಳಿಗೆ ಇತ್ತೀಚೆಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಇದೀಗ ಉತ್ತರ ಪ್ರದೇಶದ ಕಾನ್ಪುರದ ಕನಿಷ್ಠ 10 ಶಾಲೆಗಳಿಗೂ ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಇದರಿಂದ ಪೋಷಕರು ಮತ್ತು ಜನತೆಯಲ್ಲಿ ಆತಂಕ ಮನೆ ಮಾಡಿದೆ.
ರಷ್ಯಾದ ಸರ್ವರ್ ಮೂಲಕ ಕಾನ್ಪುರದ ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಹರೀಶ್ ಚಂದರ್ ಮಾತನಾಡಿ, ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಇರುವ ಬಗ್ಗೆ ಕಾನ್ಪುರ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸೈಬರ್ ಸೆಲ್ ಈ ಬಗ್ಗೆ ತನಿಖೆ ನಡೆಸುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಸಂಪೂರ್ಣವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಜೊತೆಗೆ ಈ ಹಿಂದೆ ಬೆದರಿಕೆ ಸಂದೇಶ ಸ್ವೀಕರಿಸಿದ ಅನೇಕ ಶಾಲೆಗಳು, ವಿಮಾನ ನಿಲ್ದಾಣಗಳು ಮತ್ತು ಆಸ್ಪತ್ರೆಗಳ ನಡುವಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ, ಪೊಲೀಸರು ತನಿಖೆ ಆರಂಭಿಸಿರುವುದರಿಂದ ಪೋಷಕರು ಭಯಭೀತರಾಗಬೇಡಿ. ಯಾವುದೇ ಆತಂಕ ಬೇಡ ಎಲ್ಲ ಪಾಲಕರಿಗೂ ನಾನು ವಿನಂತಿಸುತ್ತೇನೆ. ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಪರ್ಕಿಸುತ್ತಾರೆ. ಶೀಘ್ರದಲ್ಲೇ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಉನ್ನತ ಪೊಲೀಸ್ ಅಧಿಕಾರಿ ಹೇಳಿದರು.
ಸೋಮವಾರ ರಾಜಸ್ಥಾನದ ರಾಜಧಾನಿ ಜೈಪುರದ ಹಲವಾರು ಶಾಲೆಗಳಿಗೆ ಇಮೇಲ್ ಮೂಲಕ ಇದೇ ರೀತಿಯ ಬಾಂಬ್ ಬೆದರಿಕೆಗಳು ಬಂದಿದ್ದವು. ಈ ಬೆದರಿಕೆ ಸಂದೇಶಗಳ ನಂತರ ಈ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿತ್ತು. ಬಾಂಬ್ ಪತ್ತೆ ಕಾರ್ಯವನ್ನು ಕೈಗೊಳ್ಳಲು ಬಾಂಬ್ ಸ್ಕ್ವಾಡ್‌ಗಳೊಂದಿಗೆ ಪೊಲೀಸ್ ತಂಡಗಳು ಶಾಲೆಗಳಿಗೆ ಧಾವಿಸಿ ಪರಿಶೀಲಿಸಿದ್ದವು.
ಸೋಮವಾರ ರಾತ್ರಿ ಉತ್ತರಾಖಂಡ್‌ನ ಉಧಮ್ ಸಿಂಗ್ ನಗರ ಜಿಲ್ಲೆಯ ಪಂತ್‌ನಗರ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗದ ಕಾರಣ ಇದ್ದೊಂದು ಹುಸಿ ಬೆದರಿಕೆ ಎಂದು ಸಾಬೀತಾಗಿದೆ.
ಈ ಹಿಂದೆ ದೆಹಲಿ - ಎನ್‌ಸಿಆರ್‌ನ 100ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಆಗ ಪೋಷಕರಲ್ಲಿ ಭೀತಿಯನ್ನು ಉಂಟುಮಾಡಿತ್ತು. ದೆಹಲಿ ಪೊಲೀಸರ ಪ್ರಕಾರ, ಮೇ 1ರಂದು ಒಟ್ಟು 131 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಆದಾಗ್ಯೂ, ಗೃಹ ವ್ಯವಹಾರಗಳ ಸಚಿವಾಲಯವು ಹುಸಿ ಇಮೇಲ್ ಬೆದರಿಕೆಗಳೆಂದು ಅಧಿಕೃತ ಹೇಳಿಕೆ ನೀಡಿತ್ತು.
ಮೇ 11ರಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣ ಮತ್ತು ದೀಪ್ ಚಂದ್ ಬಂಧು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ದಾದಾ ದೇವ್ ಆಸ್ಪತ್ರೆ ಮತ್ತು ಹೆಡ್ಗೆವಾರ್ ಆಸ್ಪತ್ರೆ ಸೇರಿ ನಾಲ್ಕು ಆಸ್ಪತ್ರೆಗಳಿಗೂ ಇದೇ ರೀತಿಯಾಗಿ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ಆದರೆ, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿರಲಿಲ್ಲ. ಇದಕ್ಕೂ ಮುನ್ನ ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು.
ಇದನ್ನೂ ಓದಿ: ಬೆಂಗಳೂರು: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್