ನವದೆಹಲಿ: ರೈತರು ನಡೆಸುತ್ತಿರುವ ಹೋರಾಟಕ್ಕೆ ಪರಿಹಾರ ಸಿಗಬೇಕಾದರೆ, ಮಾತುಕತೆಯೊಂದೇ ಹಾದಿ. ಅದಕ್ಕೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ರೈತರು ಸಂಘರ್ಷ ಬಿಟ್ಟು ಮಾತುಕತೆಗೆ ಆಗಮಿಸಬೇಕು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸರ್ಕಾರ ರೈತರೊಂದಿಗೆ ಸಂವಾದ ನಡೆಸಲು ಯಾವಾಗಲೂ ಸಿದ್ಧವಾಗಿರುತ್ತದೆ. ಪ್ರತಿಭಟನಾನಿರತ ರೈತರು ನಮ್ಮ 'ಅನ್ನದಾತರು'. ಅವರ ವಿರುದ್ಧವಾದ ಯಾವುದೇ ನಿರ್ಧಾರಗಳು ತೆಗೆದುಕೊಳ್ಳುವುದಿಲ್ಲ. ಎಂಎಸ್‌ಪಿ ಕುರಿತಂತೆ ಸಮಗ್ರ ಚರ್ಚೆ ನಡೆಯಬೇಕಿದೆ. ಮಾತುಕತೆಗೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಮತ್ತು ರೈತರಿಗೆ ನೀಡಿದ ಸೌಲಭ್ಯಗಳ ಬಗ್ಗೆ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದರು.
ವಿಶ್ವದಾದ್ಯಂತ ರಸಗೊಬ್ಬರಗಳ ಬೆಲೆ ಹೆಚ್ಚಳವಾಗಿದ್ದರೂ, ದೇಶದ ರೈತರಿಗೆ ವಿವಿಧ ರಸಗೊಬ್ಬರ ಮತ್ತು ಯೂರಿಯಾ ಬೆಲೆ ಏರಿಕೆಯನ್ನು ತಡೆದಿದ್ದೇವೆ. ಇದಕ್ಕಾಗಿ ಸರ್ಕಾರವು 3 ಲಕ್ಷ ಕೋಟಿ ರೂ.ಗಳ ಸಹಾಯಧನವನ್ನೂ ನೀಡಿದೆ. ಮೂರು ವರ್ಷಗಳ ನಿರಂತರ ಶ್ರಮದ ಬಳಿಕ ನ್ಯಾನೋ ಯೂರಿಯಾವನ್ನು ದೇಶಕ್ಕೆ ತಂದಿದ್ದೇವೆ. ಯುಪಿಎ ಆಡಳಿತದ 10 ವರ್ಷಗಳಲ್ಲಿ ಗೋಧಿ, ಭತ್ತ ಮತ್ತು ಎಣ್ಣೆಕಾಳುಗಳಿಗೆ ಎಂಎಸ್‌ಪಿ ಮೇಲೆ 5.50 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಮೋದಿ ಸರ್ಕಾರ 18 ಲಕ್ಷದ 39 ಸಾವಿರ ಕೋಟಿ ರೂ. ವ್ಯಯಿಸಿದೆ. ಅಂದರೆ ಇದು 3.50 ಪಟ್ಟು ಹೆಚ್ಚು ಎಂದು ಠಾಕೂರ್ ತಿಳಿಸಿದರು.
ಯೋಜನೆಗಳ ಬಗ್ಗೆ ಮಾಹಿತಿ: ಬೇಳೆಕಾಳುಗಳಿಗೆ ಯುಪಿಎ ಸರ್ಕಾರ 1936 ಕೋಟಿ ರೂ. ವ್ಯಯಿಸಿದ್ದರೆ, ಬಿಜೆಪಿ ಸರ್ಕಾರ 55,000 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಎಣ್ಣೆ ಕಾಳುಗಳಿಗೆ ಯುಪಿಎ 11 ಸಾವಿರ ಕೋಟಿ ಖರ್ಚು ಮಾಡಿದರೆ, ನಾವು 33 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಗೋಧಿಗೆ ಕಾಂಗ್ರೆಸ್ ಸರ್ಕಾರ 2 ಲಕ್ಷದ 80 ಸಾವಿರ ರೂ. ಖರ್ಚು ಮಾಡಿದರೆ, ನಮ್ಮ ಸರ್ಕಾರ 12 ಲಕ್ಷದ 80 ಸಾವಿರ ಖರ್ಚು ಮಾಡಿದೆ. 12 ಕೋಟಿ ರೈತರ ಖಾತೆಗಳಿಗೆ ಮೋದಿ ಸರ್ಕಾರ 2.81 ಲಕ್ಷ ಕೋಟಿ ರೂಪಾಯಿ ಜಮಾ ಮಾಡಿದೆ. ಯುಪಿಎ ಅವಧಿಯಲ್ಲಿ ರೈತರಿಗೆ ಪರಿಹಾರ ಕೂಡ ಸಿಕ್ಕಿರಲಿಲ್ಲ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 1.54 ಲಕ್ಷ ಕೋಟಿ ರೂಪಾಯಿಗಳ ಪರಿಹಾರವನ್ನು ಬಿಜೆಪಿ ಸರ್ಕಾರ ನೀಡಿದೆ ಎಂದು ಅನುರಾಗ್ ಠಾಕೂರ್ ವಿವರಿಸಿದರು.
ಇದನ್ನೂ ಓದಿ: ಸಂಘರ್ಷಕ್ಕೆ ತಿರುಗಿದ ರೈತ ಹೋರಾಟ: ಓರ್ವ ಸಾವು, 12 ಪೊಲೀಸರಿಗೆ ಗಾಯ, 2 ದಿನ ಪ್ರತಿಭಟನೆ ಸ್ಥಗಿತ