ಲಖನೌ (ಉತ್ತರ ಪ್ರದೇಶ): ರಸ್ತೆ ಬದಿಯ ಗುಡಿಸಲಿಗೆ ಟ್ರಕ್ವೊಂದು ನುಗ್ಗಿದ ಪರಿಣಾಮ 9 ತಿಂಗಳ ಗರ್ಭಿಣಿ ಮತ್ತು ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಉಮೇಶ್ (34), ಪತ್ನಿ ನೀಲಂ (32) ಮತ್ತು ಮಕ್ಕಳಾದ ಗೋಲು (4), ಸನ್ನಿ (13) ಎಂದು ಗುರುತಿಸಲಾಗಿದೆ.
ಇಲ್ಲಿನ ಬಿಬಿಡಿ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಉಮೇಶ್ ಹಾಗೂ ನೀಲಂ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಶುಕ್ರವಾರ ರಾತ್ರಿ 11:30ರ ಸುಮಾರಿಗೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ವೊಂದು ಗುಡಿಸಲಿಗೆ ನುಗ್ಗಿದೆ. ಅಲ್ಲದೇ, ಪಲ್ಟಿಯಾಗಿ ಟ್ರಕ್ ನುಜ್ಜುಗುಜ್ಜಾಗಿದೆ. ಟ್ರಕ್ ನುಗ್ಗಿದ ರಭಸಕ್ಕೆ ಗುಡಿಸಲಿನಲ್ಲಿದ್ದ ಉಮೇಶ್, ನೀಲಂ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅದೃಷ್ಟವಶಾತ್ ಎಂದರೆ ಈ ಘಟನೆಯಲ್ಲಿ ಮತ್ತೊಬ್ಬ ಮಗಳು, 7 ವರ್ಷದ ವೈಷ್ಣವಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಯ ನಂತರ ಅಕ್ಕಪಕ್ಕದ ಜನರ ಕಿರುಚಾಟ ಕೇಳಿ ಸ್ಥಳದಲ್ಲಿ ಹೆಚ್ಚಿನ ಜನ ಜಮಾಯಿಸಿದ್ದರು. ಜೊತೆಗೆ ಅಪಘಾತದ ಮಾಹಿತಿ ಪಡೆದ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮೃತ ಉಮೇಶ್ ಕುಟುಂಬಸ್ಥರು ಮೂಲತಃ ಬಾರಾಬಂಕಿ ಜಿಲ್ಲೆಯ ಜೈತ್‌ಪುರದ ನಿವಾಸಿಗಳಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಬಿಬಿಡಿ ವಿಶ್ವವಿದ್ಯಾಲಯದ ಮುಂಭಾಗದ ರಸ್ತೆ ಬದಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಉಮೇಶ್ ಕಲ್ಲಿನ ನಾಮಫಲಕಗಳ ಕೆತ್ತನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪ್ರತಿ ನಿತ್ಯದಂತೆ ಶುಕ್ರವಾರ ರಾತ್ರಿ ಕೂಡ ಕುಟುಂಬ ಸಮೇತರಾಗಿ ಊಟ ಮಾಡಿ ಗುಡಿಸಲಿನಲ್ಲಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಮೇಶ್ ಹಿರಿಯ ಸಹೋದರ ಅಮರ್ ಸಿಂಗ್ ಮಾತನಾಡಿ, ಉಮೇಶ್ ತಮ್ಮ ಕುಟುಂಬದೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಪತ್ನಿ ನೀಲಂ 9 ತಿಂಗಳ ಗರ್ಭಿಣಿಯಾಗಿದ್ದರು. ಅಪಘಾತದಲ್ಲಿ ಪತಿ, ಪತ್ನಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಈಗ ಒಂದು ಹೆಣ್ಣು ಮಗು ಬುದುಕುಳಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕಳೆದುಕೊಂಡ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮತ್ತೊಂದೆಡೆ, ಈಗಾಗಲೇ ಟ್ರಕ್ ಚಾಲಕ ಮತ್ತು ಕ್ಲೀನರ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ: 30ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ