ವಿಲ್ಲುಪುರಂ (ತಮಿಳುನಾಡು): ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ಸ್ಥಾಪಿಸಿರುವ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂನ (ಟಿವಿಕೆ) ಮೊದಲ ರಾಜ್ಯ ಸಮಾವೇಶಕ್ಕೆ ಜನರು ಸಾಗರೋಪಾದಿಯಲ್ಲಿ ಧಾವಿಸಿ ಬಂದಿದ್ದರು. ದುರಾದೃಷ್ಟವಶಾತ್ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಅಭಿಮಾನಿಗಳು ಸಾವಿಗೀಡಾಗಿದ್ದಾರೆ.
ವಿಲ್ಲುಪುರಂ ಜಿಲ್ಲೆಯ ವಿಕ್ರವಂಡಿ ವಿ ಸಲೈ ಗ್ರಾಮದಲ್ಲಿ ಟಿವಿಕೆ ಪಕ್ಷದ ಸಮಾವೇಶ ಆಯೋಜಿಸಲಾಗಿದೆ. ಅಲ್ಲಿಗೆ ತೆರಳುತ್ತಿದ್ದಾಗ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಾವಿಗೀಡಾಗಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ.
ಮೊದಲ ಘಟನೆಯಲ್ಲಿ, ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಚೆನ್ನೈನ ಸೆಂಟ್ರಲ್ ಮೂರ್ ಮಾರ್ಕೆಟ್‌ನಿಂದ ತೇನಂಪೇಟ್ ಟಿಎಂಎಸ್ ಮೆಟ್ರೋ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಅವರ ವಾಹನಕ್ಕೆ ಮರಳು ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಾಯಗೊಂಡಿದ್ದಾನೆ.
ಇನ್ನೊಂದು ದುರಂತದಲ್ಲಿ, ವಿಕ್ರವಂಡಿ ಬಳಿ ಚಲಿಸುವ ರೈಲಿನಿಂದ ಹಾರಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಟಿವಿಕೆ ಕಾರ್ಯಕ್ರಮಕ್ಕೆ ಬರುತ್ತಿದ್ದರು ಎಂದು ವಿಲ್ಲುಪುರಂ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ಜನರ ಆಗಮನ: ಇನ್ನು, ಸಮ್ಮೇಳನಕ್ಕೆ ಬೃಹತ್ ಜನಸಮೂಹ ಹರಿದು ಬಂದಿದೆ. ಪೊಲೀಸರು ಅಂದಾಜಿಸಿರುವ ಪ್ರಕಾರ, ಬೆಳಗ್ಗೆ 10 ಗಂಟೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಜಮಾಯಿಸಿದ್ದರು. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಯಿತು. ಇದರಿಂದ ಸಂಚಾರ ದಟ್ಟಣೆಯಾಯಿತು. ಸಾವಿರಾರು ವಾಹನಗಳು ವಿಲ್ಲುಪುರಂ ಟೋಲ್ ಗೇಟ್ ಬಳಿ ನಿಂತಿದ್ದ ದೃಶ್ಯ ಕಂಡುಬಂತು.
ಮಧ್ಯಾಹ್ನದ ಸುಡು ಬಿಸಿಲಿಗೂ ಬಗ್ಗದ ಅಭಿಮಾನಿಗಳು, ಕಾರ್ಯಕ್ರಮದಲ್ಲಿ ಹಾಜರಿದ್ದರು. ನೆರಳಿಗಾಗಿ ತಮ್ಮ ತಲೆಯ ಮೇಲೆ ಕುರ್ಚಿಗಳನ್ನು ಹಿಡಿದಿದ್ದರು. ಸ್ಥಳದಲ್ಲಿ ಹನ್ನೊಂದು ವೈದ್ಯಕೀಯ ಶಿಬಿರಗಳನ್ನು ಹಾಕಲಾಗಿದೆ. ಪ್ರತಿಯೊಂದರಲ್ಲಿ 50ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಬಹುದಾಗಿದೆ. ಜಿಲ್ಲಾ ವೈದ್ಯಕೀಯ ಇಲಾಖೆಯು 300 ವೈದ್ಯರು ಮತ್ತು 25 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದು, 24 ಆಂಬ್ಯುಲೆನ್ಸ್‌ಗಳು ಸಿದ್ಧತೆಯಲ್ಲಿಡಲಾಗಿತ್ತು.
ಇದನ್ನೂ ಓದಿ: 26/11ರ ಮುಂಬೈ ದಾಳಿಗೆ ಅಂದಿನ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿಲ್ಲ: ಜೈಶಂಕರ್