ಹೈದರಾಬಾದ್: ತಿರುಮಲದಲ್ಲಿ ಭಕ್ತರಿಗೆ ಲಡ್ಡು ಪ್ರಸಾದವನ್ನು ಪಾರದರ್ಶಕತೆಯಿಂದ ಮಾರಾಟ ಮಾಡುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟೋಕನ್ ರಹಿತ ಭಕ್ತರಿಗೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದೆ.
ಈ ಕುರಿತು ಮಾತನಾಡಿರುವ ಟಿಟಿಡಿ ಹೆಚ್ಚುವರಿ ಇಒ ಸಿಎಚ್ ವೆಂಕಯ್ಯ ಚೌದರಿ, ಮಧ್ಯವರ್ತಿಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ. ದರ್ಶನ ಟಿಕೆಟ್ ಹೊಂದಿರುವವರಿಗೆ ಲಡ್ಡು ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದರ್ಶನಕ್ಕೆ ಟಿಕೆಟ್ ಕೊಳ್ಳದೇ 48- 62ನೇ ಕೌಂಟರ್ನಿಂದ ಬರುವ ಭಕ್ತರಿಗೆ ಇದು ಅನ್ವಯಿಸಲಿದೆ. ಅವರು, ತಮ್ಮ ಆಧಾರ್ ದೃಢೀಕರಣ ಮಾಡಿ, ಒಬ್ಬ ಭಕ್ತರು ಎರಡು ಲಡ್ಡುವನ್ನು ಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕೆಲವು ಏಜೆಂಟ್ಗಳು ಕಾಳಸಂತೆಯಲ್ಲಿ ಲಡ್ಡು ಪೂರೈಕೆ ಮತ್ತು ಮಾರಾಟ ಮಾಡುವುದು ಕಂಡು ಬಂದಿದ್ದು, ಪ್ರಸಾದ ದುರ್ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂತಹ ಕ್ರಮಕ್ಕೆ ಮುಂದಾಗಲಾಗಿದೆ. ದರ್ಶನದ ಟೋಕನ್ ಹೊಂದಿಲ್ಲದವರು ಅವರ ಆಧಾರ್ ಕಾರ್ಡ್ ಅನ್ನು ಲಡ್ಡು ಕೌಂಟರ್ನಲ್ಲಿ ನೋಂದಣಿ ಮಾಡಿ, ಎರಡು ಲಡ್ಡು ಪಡೆಯಬಹುದು ಎಂದರು.
ಲಡ್ಡು ವಿತರಣೆಯ ಕಾಂಪ್ಲೆಕ್ಸ್ನಲ್ಲಿ ವಿಶೇಷ ಕೌಂಟರ್ ಅನ್ನು ಮಾಡಲಾಗಿದ್ದು, ಆ ಕೌಟರ್ನಲ್ಲಿ 48 ಮತ್ತು 62ಯಿಂದ ದರ್ಶನ ಪಡೆದ ಭಕ್ತರು ಲಡ್ಡು ಪಡೆಯಬಹುದು. ಇದೇ ವೇಳೆ, ಸುಳ್ಳು ಹರಡುವ ವದಂತಿಯನ್ನು ಭಕ್ತರು ನಂಬದೇ ದಯವಿಟ್ಟು ಟಿಟಿಡಿಗೆ ಸಹಕಾರ ನೀಡಿ ಎಂದು ಭಕ್ತರಿಗೆ ಮನವಿ ಮಾಡಿದರು.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲದಲ್ಲಿರುವ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲ ದೇಶದ ಸಿರಿವಂತ ದೇಗುಲಗಳಲ್ಲಿ ಒಂದಾಗಿದೆ. 5 ಸಾವಿರ ಪುರಾತನ ವರ್ಷದ ಈ ದೇಗುಲಕ್ಕೆ ದೇಶ - ವಿದೇಶದಿಂದ ಭಕ್ತರು ಹರಿದು ಬರುತ್ತಾರೆ.
ಶ್ರೀನಿವಾಸ, ಬಾಲಾಜಿ ಎಂಬ ಹಲವು ನಾಮಗಳಿಂದ ಕರೆಯಲ್ಪಡುವ ವೆಂಕಟೇಶ್ವರನಿಗೆ ಪ್ರತಿನಿತ್ಯ ಲಡ್ಡುವನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ಲಡ್ಡುಗೆ ಹಸುವಿನ ತುಪ್ಪ, ಕಡಲೆ ಹಿಟ್ಟು, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ, ಕಲಖಂಡ ಮತ್ತು ಏಲಕ್ಕಿ ಬಳಸಲಾಗುತ್ತದೆ. ಇದರ ರುಚಿ ಬಲು ಸೊಗಸಾಗಿದ್ದು, ಈ ಲಡ್ಡುಗೆ ಟಿಟಿಡಿ ಪೇಟೆಂಟ್ ಹಕ್ಕುಗಳನ್ನು ಪಡೆದಿದೆ. ದೇಗುಲದಲ್ಲಿ ಕಲ್ಯಾಣ ಲಡ್ಡು ಮತ್ತು ಸಾಮಾನ್ಯ ಲಡ್ಡು ಎಂಬ ಎರಡು ಬಗೆಯ ಲಡ್ಡು ತಯಾರಿಸಲಾಗುವುದು.
ಇದನ್ನೂ ಓದಿ: ಇವರೆಲ್ಲ ಎಷ್ಟು ಪುಣ್ಯ ಮಾಡಿದ್ದರೋ; ಪ್ರತಿ ವಾರ ತಿರುಮಲ ತಿಮ್ಮಪ್ಪನ ನೇರ ದರ್ಶನ!